ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಕೆಲ ತಿಂಗಳ ಹಿಂದೆ ಬಾಂಬ್ ಬೆದರಿಕೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ ಸುದ್ದಿ ಇನ್ನೂ ಮರೆಯಾಗುವ ಮುನ್ನವೇ, ಭಟ್ಕಳ ತಹಶೀಲ್ದಾರ್ ಕಚೇರಿಗೆ ಮತ್ತೊಮ್ಮೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ಬಂದಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 7.20ರ ವೇಳೆಗೆ ಗಯನಾ ರಮೇಶ್ ಎಂಬ ಹೆಸರಿನ ಮೇಲ್ ಖಾತೆಯಿಂದ ಭಟ್ಕಳ ತಹಶೀಲ್ದಾರ್ ಅವರಿಗೆ ಇ-ಮೇಲ್ ರವಾನೆಯಾಗಿದ್ದು, ಕಚೇರಿಯಲ್ಲಿ ಶೀಘ್ರದಲ್ಲೇ ಪ್ರಬಲ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಹಾಕಲಾಗಿದೆ. ಸಂದೇಶದಲ್ಲಿ ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು ಎಂಬ ಉಲ್ಲೇಖವೂ ಮಾಡಲಾಗಿದೆ.
ಬೆದರಿಕೆ ಮೇಲ್ ಲಭಿಸಿದ ತಕ್ಷಣ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಭಟ್ಕಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಕಾರವಾರದಿಂದ ಬಾಂಬ್ ನಿಷ್ಕ್ರೀಯ ದಳವನ್ನು ಭಟ್ಕಳಕ್ಕೆ ಕರೆಸಿಕೊಳ್ಳಲಾಗಿದೆ.
ಪ್ರಾಥಮಿಕ ಪರಿಶೀಲನೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಇರಬಹುದೆಂಬ ಶಂಕೆ ವ್ಯಕ್ತವಾದರೂ, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಹಶೀಲ್ದಾರ್ ಕಚೇರಿ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ಈ ಹಿಂದೆ ಭಟ್ಕಳ ಪೊಲೀಸ್ ಠಾಣೆಗೆ ಕೂಡ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದರು. ಇದೀಗ ಮತ್ತೆ ತಹಶೀಲ್ದಾರ್ ಕಚೇರಿಗೆ ಬೆದರಿಕೆ ಬಂದಿರುವುದರಿಂದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬೆದರಿಕೆ ಸಂದೇಶ ರವಾನಿಸಿದ ಮೇಲ್ ಖಾತೆಯ ಮೂಲ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

