ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ಜಮೀನಿನಲ್ಲಿ ಗುಂಡಿ ತೋಡುವಾಗ 2 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ನಂಬಿಸಿ, ಕಡಿಮೆ ಬೆಲೆಗೆ ಮಾರುತ್ತೇವೆ ಎಂದು ಹೇಳಿ ಖದೀಮರ ಜಾಲವೊಂದು ಬೆಳಗಾವಿ ಮೂಲದ ವ್ಯಾಪಾರಿಯೊಬ್ಬರಿಂದ 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕವಂಚೂರು ಸಮೀಪ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುರಿ ಮತ್ತು ಮಟನ್ ವ್ಯಾಪಾರಿ ಆಕಾಶ್ ಅಬುಬಕ್ಕರ್ ಕಲಾಲ್ (24) ವಂಚನೆಗೊಳಗಾದವರು. ಚಿಕ್ಕಮಗಳೂರಿನ ಹೊಸಳ್ಳಿ ಮೂಲದ ರವಿ ಹಾಗೂ ಆತನ ಐದು ಮಂದಿ ಅಪರಿಚಿತ ಸಹಚರರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖೆಡ್ಡಾಕ್ಕೆ ಕೆಡವಿದ ರೀತಿ

ಕಳೆದ ತಿಂಗಳು ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆಕಾಶ್ ಅವರ ಮಾವ ಕುಮಾರ ಭೀಮಸೀ ಕಲಾಲ್ ಅವರಿಗೆ ಆರೋಪಿ ರವಿಯ ಪರಿಚಯವಾಗಿತ್ತು. ನಂತರ ಇಬ್ಬರೂ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಒಂದು ವಾರದ ಹಿಂದೆ ರವಿ, “ನಮ್ಮ ಮನೆಯ ಪಕ್ಕ ನೆಲ ಅಗೆಯುವಾಗ 2 ಕೆ.ಜಿ. ಬಂಗಾರ ಸಿಕ್ಕಿದೆ, ಖರೀದಿಸುತ್ತೀರಾ?” ಎಂದು ಕೇಳಿದ್ದ. ಬಳಿಕ ಕುಮಾರ ತಮ್ಮ ಅಳಿಯ ಆಕಾಶ್ ಅವರ ಸಂಪರ್ಕ ಸಂಖ್ಯೆಯನ್ನು ನೀಡಿದ್ದರು.

ಫೆ. 16ರಂದು ಶಿವಮೊಗ್ಗದ ಹಾರುವಳ್ಳಿಗೆ ಆಕಾಶ್ ಮತ್ತು ಅವರ ಮಾವನನ್ನು ಕರೆಸಿಕೊಂಡ ರವಿ, ಒಂದು ಬಂಗಾರದ ನಾಣ್ಯವನ್ನು ಮಾದರಿಯಾಗಿ ನೀಡಿದ್ದ. ಆಕಾಶ್ ಊರಿಗೆ ಹಿಂತಿರುಗಿ ಪರೀಕ್ಷಿಸಿದಾಗ ಅದು ಅಸಲಿ ಬಂಗಾರವೆಂದು ದೃಢಪಟ್ಟಿತ್ತು. ಇದರಿಂದ ಸಂಪೂರ್ಣವಾಗಿ ನಂಬಿಕೆ ಪಡೆದ ಆಕಾಶ್‌ಗೆ ಫೆ. 21ರಂದು 10 ಲಕ್ಷ ರೂ. ನಗದು ತೆಗೆದುಕೊಂಡು ಸಿದ್ದಾಪುರಕ್ಕೆ ಬರಲು ಸೂಚಿಸಲಾಗಿತ್ತು.

ಅದರಂತೆ ಭಾನುವಾರ ತಡರಾತ್ರಿ ಬಾಡಿಗೆ ಕಾರಿನಲ್ಲಿ (KA-22 MA-3070) ಆಕಾಶ್ ತಮ್ಮ ಮಾವ ಮತ್ತು ತಮ್ಮನೊಂದಿಗೆ ಹೊರಟು, ಸೋಮವಾರ ಬೆಳಿಗ್ಗೆ 8 ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣ ತಲುಪಿದ್ದರು.

ನಕಲಿ ನಾಣ್ಯ ನೀಡಿ ಪರಾರಿ

ಸಿದ್ದಾಪುರಕ್ಕೆ ಬಂದ ನಂತರ ರವಿ, ಕವಂಚೂರು ಗ್ರಾಮದ ಹಿತ್ತಲಕೊಪ್ಪ ಕ್ರಾಸ್ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ. ಅಲ್ಲಿ 30-35 ವರ್ಷ ವಯಸ್ಸಿನ ಐವರು ಅಪರಿಚಿತರು ಇದ್ದರು. ಬಿಳಿ ಬಟ್ಟೆಯಲ್ಲಿ ಸುತ್ತಿದ ಎರಡು ಗಂಟುಗಳನ್ನು ಆಕಾಶ್ ಕೈಗಿಟ್ಟು, 10 ಲಕ್ಷ ರೂ. ನಗದು ಪಡೆದುಕೊಂಡ ಆರೋಪಿಗಳು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.

ಅನುಮಾನಗೊಂಡು ಗಂಟು ತೆರೆದು ನೋಡಿದಾಗ ನಾಣ್ಯಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದನ್ನು ಅರಿತ ಆಕಾಶ್, ಸೋಮವಾರ ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸಾರ್ವಜನಿಕರು ಇಂತಹ “ಗುಪ್ತ ನಿಧಿ” ಆಮಿಷಗಳಿಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

 

Please Share: