ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಜ್ಯ ಸರ್ಕಾರವು 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ರಾಜ್ಯಾದ್ಯಂತ ಒಟ್ಟು 153 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಪದಕ ಘೋಷಣೆಯಾಗಿದ್ದು, ಇದರಲ್ಲಿ ಶಿರಸಿ ಹಾಗೂ ಭಟ್ಕಳದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು (ಪಿಎಸ್‌ಐ) ಸ್ಥಾನ ಪಡೆದಿದ್ದಾರೆ.

ಶಿರಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ರಾಜಕುಮಾರ್ ಸಿದ್ರಾಮಪ್ಪ ಉಕ್ಕಲಿ ಹಾಗೂ ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಎಸ್. ನಾಯ್ಕ ಅವರು ತಮ್ಮ ದಕ್ಷತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಸೇವೆಯಲ್ಲಿ ತೋರಿದ ಸಾಧನೆಗಾಗಿ ಈ ಬಾರಿಯ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಏಪ್ರಿಲ್ 2ರಂದು ಪ್ರಶಸ್ತಿ ಪ್ರದಾನ

ಈ ಸಾಧಕರಿಗೆ ಏಪ್ರಿಲ್ 2, 2026ರಂದು ನಡೆಯಲಿರುವ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪದಕವನ್ನು ನೀಡಿ ಗೌರವಿಸಲಾಗುತ್ತದೆ. ಇದಕ್ಕೂ ಮುನ್ನ, ಮಾರ್ಚ್ 29ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೆ.ಎಸ್.ಆರ್.ಪಿ 3ನೇ ಪಡೆಯ ಕಮಾಂಡೆಂಟ್ ಕಚೇರಿ ಆವರಣದಲ್ಲಿ ಪೂರ್ವಭಾವಿ ತಾಲೀಮು (ರಿಹರ್ಸಲ್) ನಡೆಯಲಿದೆ. ಪದಕ ವಿಜೇತರು ಈ ತಾಲೀಮಿನಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದ್ದು, ಏಪ್ರಿಲ್ 2ರವರೆಗೆ ಬೆಂಗಳೂರಿನಲ್ಲಿ ತಂಗುವಂತೆ ಇಲಾಖೆ ಸೂಚಿಸಿದೆ.

ಜಿಲ್ಲೆಯ ಇಬ್ಬರು ಅಧಿಕಾರಿಗಳು ರಾಜ್ಯ ಮಟ್ಟದ ಗೌರವಕ್ಕೆ ಪಾತ್ರರಾಗಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಪೊಲೀಸ್ ಇಲಾಖೆಯ ಸಾಧನೆಗೆ ಮತ್ತೊಂದು ಮೆಚ್ಚುಗೆ ಸೇರ್ಪಡೆಯಾಗಿದೆ.

Please Share: