ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆಯ ದಶಕಗಳ ಕನಸಾದ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ (Super Speciality Hospital) ಕೊನೆಗೂ ನನಸಾಗುವ ಕಾಲ ಕೂಡಿಬಂದಿದೆ. ರಾಜ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರವಾರದಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ 100 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಘೋಷಿಸುವ ಮೂಲಕ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ದಶಕಗಳ ಬೇಡಿಕೆಗೆ ಒಲಿದ ಭಾಗ್ಯ:

ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳಿಲ್ಲದೆ ತುರ್ತು ಚಿಕಿತ್ಸೆಗಾಗಿ ಜನರು ನೆರೆಯ ಗೋವಾ ಅಥವಾ ಮಂಗಳೂರನ್ನು ಅವಲಂಬಿಸಬೇಕಿತ್ತು. ಈ ಗಂಭೀರ ಸಮಸ್ಯೆಯನ್ನು ಮನಗಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಇತ್ತೀಚೆಗಷ್ಟೇ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ವೇದಿಕೆಯ ಮೇಲೆಯೇ ಈ ಬಗ್ಗೆ ಭರವಸೆ ನೀಡಿದ್ದರು. “ಮುಂದಿನ ಬಜೆಟ್‌ನಲ್ಲಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗುವುದು” ಎಂದು ನೀಡಿದ್ದ ಮಾತನ್ನು ಇದೀಗ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸುವ ಮೂಲಕ ಮುಖ್ಯಮಂತ್ರಿಗಳು ಉಳಿಸಿಕೊಂಡಿದ್ದಾರೆ.

ಮಂಗಳೂರು, ಗೋವಾ ಅಲೆದಾಟಕ್ಕೆ ಮುಕ್ತಿ:

ಬಜೆಟ್‌ನಲ್ಲಿ ಕಾರವಾರ ಮತ್ತು ಯಾದಗಿರಿ ಜಿಲ್ಲೆಗಳಿಗೆ ತಲಾ 100 ಕೋಟಿ ರೂ. ವೆಚ್ಚದ ಆಸ್ಪತ್ರೆಗಳನ್ನು ಘೋಷಿಸಲಾಗಿದ್ದು, ಇದು ಉತ್ತರ ಕನ್ನಡದ ಕರಾವಳಿ ಹಾಗೂ ಮಲೆನಾಡು ಭಾಗದ ಜನರಿಗೆ ಸಂಜೀವಿನಿಯಾಗಲಿದೆ. ಈ ಸುಸಜ್ಜಿತ ಆಸ್ಪತ್ರೆಯು ಕಾರ್ಯಾರಂಭ ಮಾಡಿದರೆ, ಉನ್ನತ ಮಟ್ಟದ ಶಸ್ತ್ರಚಿಕಿತ್ಸೆಗಳು ಹಾಗೂ ಗಂಭೀರ ಕಾಯಿಲೆಗಳಿಗೆ ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ ದೊರೆಯಲಿದೆ. ಇದರಿಂದಾಗಿ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದ್ದು, ಬಡ ರೋಗಿಗಳ ಪಾಲಿಗೆ ಇದು ವರದಾನವಾಗಲಿದೆ.

ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಕೊಟ್ಟ ಮಾತಿನಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

Please Share: