ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಬೆಳಿಗ್ಗೆ ಗಂಭೀರ ಘಟನೆ ನಡೆದಿದೆ. ಮಾದಕ ವಸ್ತುಗಳ ಪ್ರವೇಶವನ್ನು ಸಂಪೂರ್ಣವಾಗಿ ತಡೆದು ಕಟ್ಟುನಿಟ್ಟಿನ ನಿಗಾವಹಿಸಿದ್ದ ಹಿನ್ನೆಲೆಯಲ್ಲಿ, ಮಂಗಳೂರು ಮೂಲದ ರೌಡಿಗಳೊಬ್ಬರ ತಂಡ ಜೈಲರ್ ಹಾಗೂ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆತಂಕ ಸೃಷ್ಟಿಸಿದೆ.
ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂಬ ಆರೋಪಿಗಳು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದು, ಬಳಿಕ ಏಕಾಏಕಿ ದಾಳಿ ನಡೆಸಿದ್ದಾರೆ. ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಕಾರಾಗೃಹ ಸಿಬ್ಬಂದಿಗಳು ಹಲ್ಲೆಗೆ ಒಳಗಾಗಿದ್ದು, ಅವರ ಬಟ್ಟೆ ಹರಿದು ಗಾಯಗೊಂಡ ಸ್ಥಿತಿಯಲ್ಲಿ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಂಗಳೂರು ಕಾರಾಗೃಹದಲ್ಲಿ ಹೆಚ್ಚುವರಿ ಆರೋಪಿಗಳಾಗಿದ್ದ ಈ ಇಬ್ಬರು ರೌಡಿಗಳನ್ನು ಕೆಲವು ದಿನಗಳ ಹಿಂದೆ ಭದ್ರತಾ ಕಾರಣದಿಂದ ಕಾರವಾರ ಜೈಲಿಗೆ ವರ್ಗಾಯಿಸಲಾಗಿತ್ತು. ಇವರು ಡಕಾಯತಿ ಸೇರಿ 12ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿ ಮಾದಕ ವಸ್ತುಗಳ ಸಾಗಾಟಕ್ಕೆ ಸಂಪೂರ್ಣ ತಡೆ ಹಾಕಿ ಕಠಿಣ ನಿಗಾವಹಿಸಲಾಗಿದ್ದು, ಇದನ್ನು ವಿರೋಧಿಸಿದ್ದ ಆರೋಪಿಗಳು ಜೈಲರ್ ಜೊತೆ ಗಲಾಟೆಗೆ ಇಳಿದು ಕೊನೆಗೆ ಹಲ್ಲೆ ಪ್ರವೃತ್ತಿಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ ಕಾರಾಗೃಹ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಪ್ರಕ್ರಿಯೆ ಆರಂಭವಾಗಿದೆ.

