ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಿರಂತರ ಮದ್ಯಪಾನದ ವ್ಯಸನದಿಂದ ಕುಟುಂಬದಲ್ಲಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಿನ್ನರ ಗ್ರಾಮದ ಬೋರಿಬಾಗ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಮನೋಹರ ಮಹಾದೇವ ನಾಯ್ಕ (58) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಿಂದ ಇಲೆಕ್ಟ್ರೀಷಿಯನ್ ಆಗಿದ್ದು, ಕಿನ್ನರ ಗ್ರಾಮದ ಬೋರಿಬಾಗದ ಗರ್ತನಾಯ್ಕವಾಡಾದಲ್ಲಿ ವಾಸವಾಗಿದ್ದರು. ಅಲ್ಲದೆ ಕಿನ್ನರ ಗ್ರಾಮದ ಬಿಜೆಪಿ ಬೂತ್ ಸಂಖ್ಯೆ 56ರ ಅಧ್ಯಕ್ಷರಾಗಿದ್ದು, ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಹಾಗೂ ಕ್ರಿಯಾಶೀಲ ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ.
ಕುಟುಂಬದವರ ಪ್ರಕಾರ, ಮನೋಹರ ಅವರು ಪ್ರತಿದಿನ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ಈ ಕುರಿತು ಅವರ ಪತ್ನಿ ಮೀನಾ (45) ಅವರು ಮದ್ಯಪಾನ ಮಾಡಬೇಡ ಎಂದು ಹಲವು ಬಾರಿ ಬುದ್ಧಿವಾದ ಹೇಳುತ್ತಿದ್ದರು. ಇದೇ ವಿಷಯವಾಗಿ ಹಿಂದೆ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರೆಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ 8ರಂದು ಸಂಜೆ ಸುಮಾರು 5.15ರ ವೇಳೆಗೆ ಮನೆಯಿಂದ ಹೊರಟ ಮನೋಹರ ಅವರು ಕಿನ್ನರ ಗ್ರಾಮದ ಬೋರಿಬಾಗ ಸಮೀಪದ ಕಾಳಿ ನದಿಯ ತೀರಕ್ಕೆ ತೆರಳಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಘಟನೆ ತಿಳಿದ ಸ್ಥಳೀಯ ಗ್ರಾಮಸ್ಥರು ನದಿಯಲ್ಲಿ ಹುಡುಕಾಟ ನಡೆಸಿದ್ದು, ಸಂಜೆ ಸುಮಾರು 6.50ರ ವೇಳೆಗೆ ಅವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ.
ನಂತರ ಮೃತದೇಹವನ್ನು ಕಾರವಾರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್.ಎಸ್-2023ರ ಕಲಂ 194 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೃತರ ಪತ್ನಿ ಮೀನಾ ಮನೋಹರ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
