ಕರಾವಳಿ ವಾಯ್ಸ್ ನ್ಯೂಸ್

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯಲ್ಲಾಪುರದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿರಸಿ ತಾಲೂಕಿನ ಹಾರುಗಾರ ಸೇತುವೆ ಬಳಿ ಬೈಕ್ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ನಡೆದಿದೆ. ಬೈಕಿನಲ್ಲಿ ಸಂಚರಿಸುತ್ತಿದ್ದ ಇಬ್ಬರಲ್ಲಿ ಒಬ್ಬರು ಅಪಘಾತದ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರನ್ನು ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದ ಅಂತಿಗೇರಿಯ ನಿವಾಸಿ ಸಂಕೇತ ನೀಲಕಂಠ ದೇಸಾಯಿ (25) ಎಂದು ಗುರುತಿಸಲಾಗಿದೆ. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಜನವರಿ 13ರಂದು ಸಂಜೆ ಶಿರಸಿಗೆ ತೆರಳಿದ್ದ ಸಂಕೇತ ದೇಸಾಯಿ, ನಂತರ ಕುಮಟಾ ಮಾರ್ಗವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಬೈಕ್‌ನ ಹಿಂಬದಿ ಸವಾರನಾಗಿ ಯಲ್ಲಾಪುರ ತಾಲೂಕಿನ ಬಿಜನಕೊಪ್ಪದ ನಾಗರಾಜ ಹರಿಶ್ಚಂದ್ರ ಪಾಟೀಲ ಅವರು ಇದ್ದರು. ಹಾರುಗಾರ ಸೇತುವೆ ಬಳಿ ಬೈಕ್‌ನ ವೇಗ ಹೆಚ್ಚಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಮೇಲೆ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಸಂಕೇತ ದೇಸಾಯಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿಂಬದಿ ಸವಾರ ನಾಗರಾಜ ಪಾಟೀಲ ಅವರ ತಲೆ, ಸೊಂಟ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

Please Share: