ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸೈಬರ್ ಮೋಸ ಪ್ರಕರಣವೊಂದರಲ್ಲಿ ಬ್ಯಾಂಕ್ ಸಿಬ್ಬಂದಿಯೇ ವಂಚನೆ ಜಾಲದಲ್ಲಿ ಕೈಜೋಡಿಸಿದ್ದಾರೆಯೇ ಎಂಬ ಆತಂಕ ಮೂಡಿಸುವ ಘಟನೆ ಬಹಿರಂಗವಾಗಿದೆ. ಕಾರವಾರ ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೈದ್ರಾಬಾದ್‌ನಲ್ಲಿ ವಾಸವಾಗಿರುವ ತೆಲಂಗಾಣದ ವಾರಂಗಲ್–ಮೆಹಬೂಬಾಬಾದ್ ಮೂಲದ ಪಿಣ್ಣಿ ಶ್ರವಣಕುಮಾರ್ ಮಲ್ಲಯ್ಯ ಹಾಗೂ ಮಲಕಾಜಗಿರಿ ನಿವಾಸಿ ವಿನಯಕುಮಾರ್ ಸತ್ಯನಾರಾಯಣ ಜೈನ್ ಎಂಬವರನ್ನು ಬಂಧಿಸಿ ಕಾರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇಬ್ಬರೂ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಪಬ್ಲಿಕ್ ರಿಲೇಶನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರಾಗಿದ್ದು, ಬೇರೆಯವರ ದಾಖಲೆಗಳಲ್ಲಿ ಖಾತೆ ತೆರೆಯಿಸಿ, ಸೈಬರ್ ವಂಚನೆಯ ಮೂಲಕ ಬಂದ ಹಣವನ್ನು ತಮ್ಮ ವಶಕ್ಕೆ ವರ್ಗಾಯಿಸಿಕೊಂಡಿದ್ದರೆಂಬ ಆರೋಪ ಹೊರ ಬಂದಿದೆ.
ಉದ್ಯಮಿಯನ್ನು ಉರುಳಿಗಿಳಿಸಿದ ‘ಟ್ರೇಡಿಂಗ್’ ಹಣತೋಟ
ಹೊನ್ನಾವರದ ಉದ್ಯಮಿ ಓಸಿಮ್ ಇಬ್ರಾಹಿಂ ಶೇಖ್ ಅವರನ್ನು ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ವಂಚಿಸಲಾಗಿತ್ತು. ಎಂ ಮಾರ್ಕೆಟ್ ಎಕ್ಸಸ್ ಎಂಬ ಆಪ್‌ನ್ನು ಬಳಸುವಂತೆ ಪ್ರೇರೇಪಿಸಿ, ಒಟ್ಟು ₹46.50 ಲಕ್ಷ ಹೂಡಿಕೆ ಮಾಡಿಸಿತ್ತು. ಆ್ಯಪ್‌ನಲ್ಲಿ ₹78 ಲಕ್ಷ ಲಾಭ ಗಳಿಸಿದಂತೆ ತೋರಿಸಿ ಸುಳ್ಳು ಭರವಸೆ ನೀಡಲಾಗಿತ್ತು. ಮೋಸಕ್ಕೆ ಒಳಗಾದ ಉದ್ಯಮಿ ಕಾರವಾರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ವಿಮಾನ ನಿಲ್ದಾಣದಲ್ಲೇ ಬಂಧನ
ದೂರು ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಬಿ. ಅಶ್ವಿನಿ ಅವರ ನೇತೃತ್ವದ ತಂಡ ತನಿಖೆ ಮುಂದುವರಿಸಿಕೊಂಡು, ನವೆಂಬರ್ 6ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಿಹಾರ ಈಸ್ಟ್ ಚಂಪಾರಣ ಮೂಲದ ಷಾ ಅಲಂ ಶಮೀಮ್ ಅಕ್ತರ್ ಎಂಬವನನ್ನು ವಶಕ್ಕೆ ಪಡೆದುಕೊಂಡಿತ್ತು.
ಅವನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಮತ್ತೊಬ್ಬ ಬಿಹಾರ ಮೂಲದ ಶಮೀಮ್ ಅಕ್ತರ್ ಅಬ್ದುಲ್ ಜಬ್ಬಾರ ಎಂಬುವನನ್ನು ಸಹ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ದೂರುದಾರರನ್ನು ಹಣ ನೀಡುವಂತೆ ಒತ್ತಾಯಿಸುತ್ತಿದ್ದಷ್ಟೇ ಅಲ್ಲ, ದೂರು ನೀಡಲು ಮುಂದಾದಾಗ ಹನಿ ಟ್ರಾಪ್‌ಗೆ ಒಳಗಾಗುವಂತೆ ಯತ್ನಿಸಿದ್ದರೆಂಬ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

