ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯನ್ನು ಮತ್ತೊಮ್ಮೆ ದುಃಖದ ಅಲೆ ಆವರಿಸಿದೆ. ಬೆಲೆಕೇರಿಯಲ್ಲಿ ಕೇವಲ ಒಂದೇ ವಾರದ ಅಂತರದಲ್ಲಿ ಎರಡು ಮೀನುಗಾರಿಕಾ ಬೋಟ್‌ಗಳು ಸಮುದ್ರದ ಅಲೆಗಳಲ್ಲಿ ತತ್ತರಿಸಿ ಮುಳುಗಿದ ಘಟನೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಜಟ್ಟಿ ಬಳಿಯ ಕಲ್ಲಿಗೆ ಬಡಿದು ‘ದುರ್ಗಾ ಪ್ರಸಾದ್’ ಎಂಬ ಪರ್ಷಿಯನ್ ಬೋಟ್ ಮುಳುಗಡೆ ಆಗಿದೆ ಎನ್ನಲಾಗಿದೆ. ಬೋಟ್‌ವು ಶ್ರೀಕಾಂತ ತಾಂಡೆಲ ಅವರ ಸ್ವಾಮ್ಯದದ್ದಾಗಿದ್ದು, ಲಕ್ಷಾಂತರ ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಕೆಲ ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ನಡೆದ ‘ಶಾರದಾಂಬ’ ಹೆಸರಿನ ಬೋಟ್ ಮುಳುಗಡೆ ಘಟನೆಯ ನೆನಪನ್ನು ಮತ್ತೆ ಜೀವಂತಗೊಳಿಸಿದೆ.
ಮೀನುಗಾರರು ಹಾಗೂ ಬೋಟ್ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಬಂದರು ಪ್ರದೇಶದಲ್ಲಿ ಹೂಳು ತೆಗೆಯುವ ಕೆಲಸ ಆಗದಿರುವುದು, ಬ್ರೇಕ್‌ವಾಟರ್ ನಿರ್ಮಾಣ ವಿಳಂಬವಾಗಿರುವುದು” ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.
ಪ್ರತಿ ಬಾರಿ ಮಳೆಯ ಗಾಳಿ ಬಲವಾದಾಗ ಬೋಟ್‌ಗಳು ನಾಶವಾಗುತ್ತಿವೆ, ಆಡಳಿತ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಣ್ಣೀರಿಡುತ್ತಿರುವ ಬೋಟ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮೀನುಗಾರರು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


