ವರದಿ: ಬಿ.ಎಸ್. ತೊಟ್ಟೆಯನವರ್
ಮುಂಡಗೋಡ, ಅ.2: ಸ್ವಾತಂತ್ರ್ಯದ ಹೋರಾಟಕ್ಕೆ ಅಹಿಂಸೆಯ ಹಾದಿ ತೋರಿದ ಮಹಾತ್ಮ ಗಾಂಧೀಜಿ, ಸರಳತೆ ಮತ್ತು ಪ್ರಾಮಾಣಿಕತೆಯ ಮೂಲಕ ದೇಶದ ಸೇವೆ ಮಾಡಿದ ಲಾಲ್ ಬಹದ್ದೂರ್ ಶಾಸ್ತ್ರಿ—ಈ ಇಬ್ಬರು ಮಹನೀಯರ ಆದರ್ಶಗಳನ್ನು ಸ್ಮರಿಸುತ್ತಾ ತಾಲೂಕಿನ ಲಾಮಾ ಕ್ಯಾಂಪ್-1ರಲ್ಲಿ ಜಯಂತಿ ಆಚರಿಸಲಾಯಿತು.
ಇಂಡೋ ಟಿಬೆಟಿಯನ್ ಅಸೋಸಿಯೇಷನ್, ಇಂಡೋ ಟಿಬೆಟಿಯನ್ ಫೆಡರೇಶನ್ ಅಸೋಸಿಯೇಷನ್ ಹಾಗೂ ಅನ್ನದಾತ ರೈತ ಸಂಘಟನೆ ವತಿಯಿಂದ ಶುಕ್ರವಾರರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾತ್ಮ ಗಾಂಧೀಜಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಇಂಡೋ ಟಿಬೆಟಿಯನ್ ಅಸೋಸಿಯೇಷನ್ ಹಿರಿಯ ಸದಸ್ಯ ಎನ್.ಡಿ. ಕಿತ್ತೂರು, ಅಹಿಂಸೆಯ ಅಸ್ತ್ರದ ಮೂಲಕ ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಹಿಂಸಾ ತತ್ವವನ್ನು ಜೀವನದಲ್ಲಿ ಪಾಲಿಸಿದರೆ ದೇಶದಲ್ಲಿ ಸುಖ, ಶಾಂತಿ ನೆಲೆಸಲು ಸಾಧ್ಯ ಎಂದರು. ಇದೇ ವೇಳೆ ಪ್ರಾಮಾಣಿಕತೆಗೆ ಹೆಸರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಸ್ಮರಿಸಿದರು.
ಅನ್ನದಾತ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಸೋಮಲಿಂಗ ಬೆಣ್ಣಿ, ಉಪಾಧ್ಯಕ್ಷ ರವಿ ಕೊಪ್ಪ, ಹಿರಿಯ ಟಿಬೆಟಿಯನ್ ಧರ್ಮಗುರು ಚಂಪಾ ಲೋಬಸಂಗ್, ಐಟಿಎಂಎ ಕನ್ವೀನರ್ ಮಲ್ಲಿಕಾರ್ಜುನ ಕಿತ್ತೂರು ಹಾಗೂ ಹಿರಿಯ ಬೌದ್ಧ ಭಿಕ್ಕುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


