ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ಆಯೋಜಿಸಿದ ಕರ್ನಾಟಕ ಟೂರಿಸಂ ಅವಾರ್ಡ್ಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದ್ದು, ಜಿಲ್ಲೆಯ ನಾಲ್ಕು ಸಂಸ್ಥೆಗಳು ಒಟ್ಟು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

Banner Ad

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.27ರಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ದಾಂಡೇಲಿ ಚಾಲೆಟ್‌ಗೆ ಅತ್ಯುತ್ತಮ ಹೋಮ್‌ಸ್ಟೇ ಪ್ರಶಸ್ತಿ ದೊರೆತಿದೆ. ಗೋಕರ್ಣದ ಸ್ವಸ್ವರ ಸಂಸ್ಥೆ ಅತ್ಯುತ್ತಮ ವೆಲ್‌ನೆಸ್ ರಿಟ್ರೀಟ್ ಹಾಗೂ ಅತ್ಯುತ್ತಮ ಪರಿಸರ ಸ್ನೇಹಿ ರೆಸಾರ್ಟ್ ಎಂಬ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಾರವಾರದ ಸಿಂಟಾಕೋರ್ ಐಲ್ಯಾಂಡ್ ರೆಸಾರ್ಟ್ ಅತ್ಯುತ್ತಮ ಬೊಟೀಕ್ ಹೋಟೆಲ್ ಪ್ರಶಸ್ತಿ ಪಡೆದಿದೆ.

ಹೊನ್ನಾವರ ಮೂಲದ ಸಂಸ್ಥಾಪಕರು ಮುನ್ನಡೆಸುತ್ತಿರುವ ಓಪನ್‌ಸ್ಟೇಸ್ ಅತ್ಯುತ್ತಮ ಟೂರಿಸಂ ಸ್ಟಾರ್ಟ್‌ಅಪ್ ಪ್ರಶಸ್ತಿಗೆ ಪಾತ್ರವಾಗಿದೆ. ಹೋಮ್‌ಸ್ಟೇ, ಹೋಟೆಲ್ ಹಾಗೂ ರೆಸಾರ್ಟ್‌ಗಳಿಗೆ ಬುಕಿಂಗ್ ಸಾಫ್ಟ್‌ವೇರ್ ಒದಗಿಸುವ ಓಪನ್‌ಸ್ಟೇಸ್ ಮೂಲಕ ಮಾಲೀಕರು ಅತಿಥಿಗಳಿಂದ ನೇರವಾಗಿ ಬುಕಿಂಗ್ ಪಡೆಯುವ ವ್ಯವಸ್ಥೆ ಹೊಂದಿದ್ದಾರೆ.

ಕಡಲತೀರ, ಕಾಡು, ನದಿ ಹಾಗೂ ಗ್ರಾಮೀಣ ಬದುಕಿನ ವೈವಿಧ್ಯವನ್ನು ಹೊಂದಿರುವ ಉತ್ತರ ಕನ್ನಡದ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಈ ಪ್ರಶಸ್ತಿಗಳು ರಾಜ್ಯಮಟ್ಟದಲ್ಲಿ ಮತ್ತೊಂದು ಮನ್ನಣೆ ನೀಡಿವೆ. ಒಂದೇ ಜಿಲ್ಲೆಯಿಂದ ಹೋಮ್‌ಸ್ಟೇ, ವೆಲ್‌ನೆಸ್ ರಿಟ್ರೀಟ್, ಪರಿಸರ ಸ್ನೇಹಿ ರೆಸಾರ್ಟ್, ಬೊಟೀಕ್ ಹೋಟೆಲ್ ಹಾಗೂ ಟೂರಿಸಂ ಸ್ಟಾರ್ಟ್‌ಅಪ್ ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ.

 

Please Share: