ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕೇರಳದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು ₹6 ಲಕ್ಷ ಮೌಲ್ಯದ ಎರಡು ಕೋಣಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ರಕ್ಷಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Banner Ad

ಬಂಧಿತ ಆರೋಪಿಗಳಾದ ಭಟ್ಕಳದ ಬಂದರ್ ರೋಡ್ 3ನೇ ಕ್ರಾಸ್ ನಿವಾಸಿ ಹಾಗೂ ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ಸರೋಶ್ ಹುಸೇನ್ ಅಸ್ಲಂ ಶಾಬಂದ್ರಿ (37) ಮತ್ತು ಬೆಂಗಳೂರಿನ ಸಿಂಗಸಂದ್ರ ಲೇಔಟ್‌ನ ಶಣ್ಮುಖ ಕೆ.ಎಸ್. ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಕೇರಳದ ಮಲಪ್ಪುರಂನಿಂದ ಕರ್ನಾಟಕದ ಭಟ್ಕಳಕ್ಕೆ ‘KA-01/AN-5893’ ನೋಂದಣಿ ಸಂಖ್ಯೆಯ ವಾಹನದಲ್ಲಿ ಕೋಣಗಳನ್ನು ತರಲಾಗುತ್ತಿತ್ತು. ಜಾನುವಾರು ಸಾಗಾಟಕ್ಕೆ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಕಸಾಯಿಖಾನೆಯಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಕದ್ದುಮುಚ್ಚಿ ತರಲಾಗಿದ್ದು, ಭಟ್ಕಳದಲ್ಲಿ ಕಟ್ಟಿಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ಕಲೆಹಾಕಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ವೆಂಕಟೇಶ್ ಮುರನಾಳ್ ಅವರು ಸಿಬ್ಬಂದಿಯೊಂದಿಗೆ ದಿಢೀರ್ ದಾಳಿ ನಡೆಸಿ ಜಾನುವಾರುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ, ಮೋಟಾರು ವಾಹನ ಕಾಯ್ದೆ ಹಾಗೂ ಬಿ.ಎನ್.ಎಸ್. 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

 

 

Please Share: