ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಾಮಾನ್ಯವಾಗಿ ರಾತ್ರಿ ವೇಳೆ ಅಥವಾ ಅಡಗಿದ ಪ್ರದೇಶಗಳಲ್ಲಿ ನಡೆಯುವ ಮಾದಕ ವಸ್ತು ಸೇವನೆ, ಈ ಬಾರಿ ಕಾರವಾರದಲ್ಲಿ ಮಟಮಟ ಮಧ್ಯಾಹ್ನವೇ ಜನಸಂಚಾರ ಹೆಚ್ಚಿರುವ ರಾಷ್ಟ್ರೀಯ ಹೆದ್ದಾರಿ-66ರ ಫ್ಲೈಓವರ್ ಕೆಳಗೆ ನಡೆದಿರುವುದು ಗಮನ ಸೆಳೆಯುವ ಘಟನೆಯಾಗಿ ಪರಿಣಮಿಸಿದೆ.

Banner Ad

ನಗರದ ಬಿಲ್ಟ್ ಸರ್ಕಲ್ ಸಮೀಪದ ಫ್ಲೈಓವರ್ ಕೆಳಗೆ ಗಾಂಜಾ ಸೇವಿಸಿ ಅಮಲಿನಲ್ಲಿ ತೇಲಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾರವಾರ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೋಣೆವಾಡದ ಕೆಇಬಿ ನಿವಾಸಿ 36 ವರ್ಷದ ಮನ್ಸೂರ್ ಶೇಖ್ ಎಂದು ಗುರುತಿಸಲಾಗಿದೆ.

ಬುಧವಾರ ರಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕ ವಸ್ತು ಸೇವಿಸಿ ಮೈಮರೆತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಉದಪ್ಪ ಎ. ದರೆಪ್ಪನವರ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿತು.

ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿಯು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ವೈದ್ಯಾಧಿಕಾರಿಗಳ ವರದಿ ಆಧರಿಸಿ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಹೆದ್ದಾರಿ ಪ್ರದೇಶದಲ್ಲೇ, ಅದೂ ಮಧ್ಯಾಹ್ನವೇ ಮಾದಕ ವಸ್ತು ಸೇವನೆ ನಡೆದಿರುವುದು ಸಾರ್ವಜನಿಕರಲ್ಲೂ ಆತಂಕ ಮೂಡಿಸಿದೆ.

 

 

Please Share: