ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ತಾಯಿ–ಮಗಳ ವಿಚಾರವಾಗಿ ನಡೆದ ಕೌಟುಂಬಿಕ ಗಲಾಟೆಯೊಂದು ಭೀಕರವಾಗಿ ತಿರುಗಿ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ವರದಿಯಾಗಿದೆ.

Banner Ad

ವ್ಯವಹಾರ ಸಂಬಂಧಿತ ವಿವಾದಕ್ಕೆ ಮಧ್ಯಸ್ಥಿಕೆಗೆ ಬಂದವರ ಮೇಲೆ ಮಾರಕ ಹಲ್ಲೆ ನಡೆದಿದ್ದು, ಈ ದಾಳಿಯಲ್ಲಿ ವಸಂತ ನಾಯ್ಕ (ಅವರಗುಪ್ಪ) ಅವರು ನುಣುಪಾದ ವಸ್ತುವಿನಿಂದ ಚುಚ್ಚಿ ಹತ್ಯೆಗೊಳಗಾಗಿದ್ದಾರೆ.

ಈ ದಾಳಿಯಲ್ಲಿ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ (ಇಬ್ಬರೂ ಅವರಗುಪ್ಪ ನಿವಾಸಿಗಳು) ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ನಿಯಂತ್ರಣ ತಪ್ಪಿ ರಕ್ತಪಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಡಿ.ಎಸ್.ಪಿ. ಗೀತಾ ಪಾಟೀಲ್, ಸಿದ್ದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೀತಾರಾಮ ಜೆ.ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ದೀಪನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಆರೋಪಿಗಳ ಪತ್ತೆಗೆ ಸಿದ್ದಾಪುರ ಪೊಲೀಸರು ವಿಶೇಷ ತಂಡ ರಚಿಸಿದ್ದು, ಬೆಳಗಾಗುವುದರೊಳಗೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಸುಚಿತ್ರಾ ನಾಯ್ಕ (ಹೊಸೂರು) ಸೇರಿದಂತೆ ಆಕೆಗೆ ಸಹಕರಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ಮುಂದುವರಿದಿದೆ.

 

 

 

Please Share: