ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ಮಂಗಳವಾರ ಮಧ್ಯಾಹ್ನ ಕಾವಲವಾಡ ಗ್ರಾಮದ ಹಟ್ಟಿ ಓಣಿ ಪ್ರದೇಶದಲ್ಲಿ ಸಂಭವಿಸಿದ ಒಂದು ಕ್ಷಣದ ನಿರ್ಲಕ್ಷ್ಯ ಚಾಲನೆ, ಒಂದು ಕುಟುಂಬದ ಬದುಕನ್ನೇ ಚೂರಾಗಿಸಿದೆ. ಹೊಸದಾಗಿ ಖರೀದಿಸಿದ್ದ ಕಾರನ್ನು ಯಾವುದೇ ಚಾಲನಾ ತರಬೇತಿ ಇಲ್ಲದೇ ಚಲಾಯಿಸಿದ ಪರಿಣಾಮ, ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಹುಜೇರ ಸಲೀಂ ಶಿಗಳ್ಳಿ ಸ್ಥಳದಲ್ಲೇ ಮೃತಪಟ್ಟಿದ್ದು, ಪಕ್ಕದಲ್ಲೇ ಕೂತಿದ್ದ ಆತನ ಅಜ್ಜಿ ತಟ್ಟಿಗೇರಿಯ ಆಶಾಬಿ ಗಫೂರ್ಸಾಬ್ ಮುಲ್ಲಾ (60) ಕೈಗೆ ಗಂಭೀರ ಗಾಯಗೊಂಡಿದ್ದಾರೆ.

ಸ್ಥಳೀಯರ ಹೇಳಿಕೆಯಂತೆ, ಗೋರೆಸಾಬ್ ವಲಿಸಾಬ್ ಉಗ್ರಾಣಿ (45) ಕೆಲವೇ ದಿನಗಳ ಹಿಂದೆ ಖರೀದಿಸಿದ್ದ ಇಕೋ ವ್ಯಾನ್‌ (ನಂ. ಕೆಎ 65 ಎಂ 3351) ಅನ್ನು ಯಾವುದೇ ಅನುಭವವಿಲ್ಲದೇ ಹಾಗೂ ಅತಿ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದನು. ಹಟ್ಟಿ ಓಣಿ ಎಂಬ ಕಿರಿದಾದ ರಸ್ತೆಯಲ್ಲಿ ವೇಗ ಹಾಗೂ ನಿಯಂತ್ರಣ ಕಳೆದುಕೊಂಡ ವಾಹನ ನೇರವಾಗಿ ಮನೆಯ ಕಟ್ಟೆಯ ಬಳಿ ನುಗ್ಗಿಬಿದ್ದಿದೆ. ಅಷ್ಟರಲ್ಲೇ ಏನಾಗುತ್ತಿದೆ ಎಂದು ಅರಿಯುವ ಮೊದಲೇ, ಆಟವಾಡುತ್ತಿದ್ದ ಬಾಲಕ ಕಾರಿನ ಕೆಳಗೆ ಸಿಲುಕಿದ್ದಾನೆ.

ಅಪಘಾತದ ಭೀಕರತೆಯನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಾರಿನ ಅಡಿಯಲ್ಲಿ ಸಿಲುಕಿದ್ದ ಬಾಲಕನನ್ನು ಹೊರತೆಗೆದು ನೋಡಿದಾಗಲೇ ಆತ ಪ್ರಾಣ ಕಳೆದುಕೊಂಡಿದ್ದನು. ಬಾಲಕನ ಪಕ್ಕದಲ್ಲೇ ಕುಳಿತಿದ್ದ ಅಜ್ಜಿ ಆಶಾಬಿ ಮುಲ್ಲಾ ಕೈ ಮುರಿತ ಸೇರಿದಂತೆ ತೀವ್ರ ಗಾಯಗಳಿಗೆ ಒಳಗಾಗಿದ್ದು, ನೋವಿನಿಂದ ಕಿರುಚುತ್ತಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಗಾಯಾಳುಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಬಾಲಕನನ್ನು ಮೃತನಾಗಿ ಘೋಷಿಸಿದರು.

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಾಲಕನ ತಾಯಿ ಅತ್ತಾಡುತ್ತಾ ಆಸ್ಪತ್ರೆ ಆವರಣದಲ್ಲಿ ಕುಸಿದುಬಿದ್ದಿದ್ದು, ಆಕ್ರಂದನ ಮುಗಿಲು ಮುಟ್ಟಿತು. “ನಮ್ಮ ಕಣ್ಣೆದುರೇ ನಮ್ಮ ಮಗನನ್ನು ಕಳೆದುಕೊಂಡೆವು” ಎಂಬ ಕುಟುಂಬದ ಅಳಲು ಹೃದಯವಿದ್ರಾವಕವಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಮನೆಮನೆಗೂ ಶೋಕದ ವಾತಾವರಣ ಆವರಿಸಿದ್ದು, ಜನರು ಮೌನವಾಗಿ ಕಂಬನಿ ಮಿಡಿದರು.

ಘಟನೆಯ ಮಾಹಿತಿ ಪಡೆದ ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಾರಿನ ನಿಯಂತ್ರಣ ತಪ್ಪಿದ್ದು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತ ಬಾಲಕನ ತಂದೆಯ ದೂರಿನ ಮೇರೆಗೆ ಆರೋಪಿತ ಗೋರೆಸಾಬ್ ಉಗ್ರಾಣಿಯನ್ನು ಪೊಲೀಸರು ಬಂಧಿಸಿದ್ದು, ನಿರ್ಲಕ್ಷ್ಯ ಚಾಲನೆ ಹಾಗೂ ಜೀವಹಾನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಕೋ ವ್ಯಾನ್‌ನ್ನು ವಶಕ್ಕೆ ಪಡೆದು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ಈ ದುರ್ಘಟನೆ ಗ್ರಾಮದಲ್ಲಿ ರಸ್ತೆ ಸುರಕ್ಷತೆ, ತರಬೇತಿ ಇಲ್ಲದೇ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದ್ದು, ಒಂದು ಕ್ಷಣದ ತಪ್ಪು ಹೇಗೆ ಅಮೂಲ್ಯ ಜೀವ ಕಿತ್ತುಕೊಳ್ಳುತ್ತದೆ ಎಂಬುದಕ್ಕೆ ಕಾವಲವಾಡದ ಈ ಘಟನೆ ಕಣ್ಣೀರಿನ ಸಾಕ್ಷಿಯಾಗಿದೆ.

 

Please Share: