ಕರಾವಳಿ ವಾಯ್ಸ್ ನ್ಯೂಸ್

ಹಳಿಯಾಳ:ಅತಿ ವೇಗದ ಚಾಲನೆಯಿಂದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ಉರುಳಿಬಿದ್ದ ಘಟನೆ ಸೋಮವಾರ ತಾಲೂಕಿನ ಕೆಸರೊಳ್ಳಿ ಕ್ರಾಸ್ ಸಮೀಪ ನಡೆದಿದೆ.

ಬಾಗಲಕೋಟೆಯಿಂದ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ಗೆ ನೀಲಗಿರಿ ಕಟ್ಟಿಗೆ ಸಾಗಿಸುತ್ತಿದ್ದ ಲಾರಿ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ಉರುಳಿದೆ. ಲಾರಿಯನ್ನು ಅತೀವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ತಿರುವನ್ನು ಸರಿಯಾಗಿ ಅಂದಾಜಿಸದೆ ನಿಯಂತ್ರಣ ಕಳೆದುಕೊಂಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ಪರಿಣಾಮ ಲಾರಿಗೆ ಭಾರೀ ನಷ್ಟ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಾರಿ ಚಾಲಕ ಪರಶುರಾಮಪ್ಪ ಅವರಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ತಿರುವಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವುದರಿಂದ, ತಕ್ಷಣವೇ ಎಚ್ಚರಿಕಾ ಸೂಚನಾ ಫಲಕಗಳು ಅಳವಡಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Please Share: