ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ನಗರದಲ್ಲಿ ಬೀಡಾಡಿ ಹೋರಿಗಳ ಹಾವಳಿ ಮತ್ತೊಮ್ಮೆ ಜೀವ ಬಲಿ ಪಡೆದಿದೆ. ಪಾದಚಾರಿಯೊಬ್ಬನ ಮೇಲೆ ಬೀಡಾಡಿ ಹೋರಿಯು ಏಕಾಏಕಿ ದಾಳಿ ನಡೆಸಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಶುಕ್ರವಾರ ನಗರದ ಟಿಎಸ್ಎಸ್ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ನಗರದ ಟಿಎಸ್ಎಸ್ ರಸ್ತೆಯ ನಿವಾಸಿ ಜೊಸೆಫ್ ಡಯಾಸ್ (62) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಕೆಲಸ ನಿಮಿತ್ತ ಮನೆ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ, ರಸ್ತೆಯಲ್ಲೇ ಬೀಡಾಡುತ್ತಿದ್ದ ಹೋರಿಯೊಂದು ಯಾವುದೇ ಪ್ರಚೋದನೆ ಇಲ್ಲದೇ ಜೊಸೆಫ್ ಡಯಾಸ್ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಹೋರಿಯ ತಿವಿತಕ್ಕೆ ಅವರು ಸಮತೋಲನ ತಪ್ಪಿ ರಸ್ತೆಯ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡರು.
ಘಟನೆಯ ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುವನ್ನು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಯ ಸುದ್ದಿ ತಿಳಿದ ಕೂಡಲೇ ಕುಟುಂಬಸ್ಥರು ಮತ್ತು ಸ್ಥಳೀಯರು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬೀಡಾಡಿ ಹೋರಿಗಳ ಸಮಸ್ಯೆ ಹಲವು ದಿನಗಳಿಂದ ಇದ್ದರೂ, ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ವಹಿಸಿರುವುದೇ ಇಂತಹ ದುರಂತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲೇ ಹೋರಿಗಳು ಅಡ್ಡಾಡುತ್ತಿರುವುದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ದಿನನಿತ್ಯ ಭಯದಲ್ಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಘಟನೆಯ ಸಂಬಂಧ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಬಸವರಾಜ ಕನಶೆಟ್ಟಿ ಅವರು ತನಿಖೆ ಕೈಗೊಂಡಿದ್ದಾರೆ. ಹೋರಿಯ ಮಾಲೀಕರ ಪತ್ತೆ, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ, ನಗರದಲ್ಲಿ ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು, ಜಾನುವಾರುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು ಎಂದು ನಾಗರಿಕರು ಹಾಗೂ ವಿವಿಧ ಸಂಘಟನೆಗಳು ನಗರಸಭೆ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
