ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಮುದಗಾದ ನೌಕಾನೆಲೆ ನಿರಾಶ್ರಿತರ ಕಾಲೋನಿಯ ಹನ್ನೆರಡು ವರ್ಷದ ಬಾಲಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಎಂಟನೇ ತರಗತಿ ವಿದ್ಯಾರ್ಥಿ ಸೊನಾಲ ಅರಗೇಕರ (12) ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದುದರಿಂದ ಸೊನಾಲ ಸ್ನೇಹಿತರೊಂದಿಗೆ ಸಮೀಪದ ಸಮುದ್ರದ ದಡಕ್ಕೆ ಆಟವಾಡಲು ತೆರಳಿದ್ದನು. ಆಟವಾಡುವ ವೇಳೆ ಸಮುದ್ರದ ನೀರಿನಲ್ಲಿ ಈಜಲು ಮುಂದಾದ ಬಾಲಕ, ಅಚಾನಕ್ ಅಲೆಗಳ ರಭಸಕ್ಕೆ ಸಿಲುಕಿದ್ದಾನೆ. ಕ್ಷಣಾರ್ಧದಲ್ಲಿ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ನಿಯಂತ್ರಣ ತಪ್ಪಿ ಸಮುದ್ರದಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.
ಸೊನಾಲ ಮುಳುಗುತ್ತಿರುವುದನ್ನು ಕಂಡ ಸ್ನೇಹಿತರು ಕೂಗಿಕೊಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಮೀನುಗಾರರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದರೂ, ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಕೆಲ ಸಮಯದ ಬಳಿಕ ಬಾಲಕನ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ದುರಂತ ಸುದ್ದಿ ತಿಳಿಯುತ್ತಿದ್ದಂತೆ ಮುದಗಾದ ನೌಕಾನೆಲೆ ನಿರಾಶ್ರಿತರ ಕಾಲೋನಿಯಲ್ಲಿ ಶೋಕದ ವಾತಾವರಣ ಆವರಿಸಿದೆ. ಬಾಲಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದು, ಸ್ಥಳೀಯರು ಹಾಗೂ ಶಾಲಾ ಸಹಪಾಠಿಗಳು ಸಂತಾಪ ಸೂಚಿಸಿದ್ದಾರೆ. ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ದುರ್ಘಟನೆ ಸಾರ್ವಜನಿಕರಲ್ಲಿ ನೋವು ಮೂಡಿಸಿದೆ.
