ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ತಾಲೂಕಿನ ಕಾಳಿ ನದಿಯಲ್ಲಿ ಮತ್ತೊಂದು ದಾರುಣ ದುರ್ಘಟನೆ ಸಂಭವಿಸಿದೆ. ಗೆಳೆಯರೊಂದಿಗೆ ಸ್ನಾನಕ್ಕೆ ತೆರಳಿದ್ದ ಯುವಕ ನವಾಜ್ ಅವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಕಾಳಿ ನದಿಯ ಸಂಗಮ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ನಾನ ಮಾಡುವ ವೇಳೆ ಅಚಾನಕ್ ನದಿಯಲ್ಲಿ ನೀರಿನ ತೀವ್ರ ಹರಿವಿಗೆ ನವಾಜ್ ಸಿಲುಕಿದ್ದಾರೆ. ಕ್ಷಣಾರ್ಧದಲ್ಲೇ ಅವರು ನದಿಯಲ್ಲಿ ಮುಳುಗಿ ಕಾಣೆಯಾಗಿದ್ದು, ಈ ವೇಳೆ ಸ್ಥಳೀಯರಲ್ಲಿ ಆತಂಕ ಮೂಡಿತು.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ದಾಂಡೇಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳವೂ ಶೋಧ ಕಾರ್ಯದಲ್ಲಿ ಪಾಲ್ಗೊಂಡವು.

ಫ್ಲೈಕ್ಯಾಚರ್ ರಾಫ್ಟಿಂಗ್ ತಂಡದ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳೀಯರ ಸಹಕಾರದೊಂದಿಗೆ ವ್ಯಾಪಕವಾಗಿ ನದಿಯಲ್ಲಿ ಶೋಧ ನಡೆಸಲಾಗಿದ್ದು, ಶೋಧ ಕಾರ್ಯದ ವೇಳೆ ನವಾಜ್ ಅವರ ಶವ ಪತ್ತೆಯಾಗಿದೆ. ಬಳಿಕ ಶವವನ್ನು ನದಿಯಿಂದ ಹೊರತೆಗೆದುಕೊಳ್ಳಲಾಯಿತು.

ಈ ದುರ್ಘಟನೆಯಿಂದ ದಾಂಡೇಲಿ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

 

 

Please Share: