ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ–ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರ ರಕ್ಷಣೆಗಾಗಿ ಹೊಂದಿದ್ದ ಡಬಲ್ ಬ್ಯಾರೆಲ್ ಬಂದೂಕು ಕಳ್ಳತನವಾಗಿರುವ ಘಟನೆ ವರದಿಯಾಗಿದೆ. ಮುಂಡಗೋಡು ತಾಲೂಕಿನ ಅಂದಲಗಿ ಗ್ರಾಮದಲ್ಲಿರುವ ಅವರ ಕೃಷಿಭೂಮಿಯ ಬೋರಿನ ಮನೆಗೆ ನುಗ್ಗಿದ ಕಳ್ಳರು ಬಂದೂಕು ಕದ್ದಿರುವ ಶಂಕೆ ವ್ಯಕ್ತವಾಗಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ ರಚನೆಯಾದ ಸಂದರ್ಭದಲ್ಲಿ ವಿ.ಎಸ್. ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲಿಯೇ ಜಯಗಳಿಸಿದ್ದರು. ಆ ಅವಧಿಯಲ್ಲಿ ತಮ್ಮ ಸ್ವ ರಕ್ಷಣೆಗಾಗಿ ಬಂದೂಕು ಪರವಾನಿಗೆಯನ್ನು ಪಡೆದಿದ್ದು, ಸುಮಾರು ₹40 ಸಾವಿರ ಮೌಲ್ಯದ ಡಬಲ್ ಬ್ಯಾರೆಲ್ ಬಂದೂಕನ್ನು ಖರೀದಿಸಿದ್ದರು. ಇದೀಗ ಅದೇ ಬಂದೂಕು ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರು ಮುಂಡಗೋಡು ತಾಲೂಕಿನ ಅಂದಲಗಿ ಗ್ರಾಮದಲ್ಲಿ ಸುಮಾರು 9 ಎಕರೆ ಕೃಷಿಭೂಮಿಯನ್ನು ಹೊಂದಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವ ಅವರು ರಾಜಕೀಯದ ಜೊತೆಗೆ ಕೃಷಿ ಕಾರ್ಯದಲ್ಲಿಯೂ ಸಕ್ರಿಯರಾಗಿದ್ದಾರೆ.
ಪಾಟೀಲ್ ಅವರು ತಮ್ಮ ಜಮೀನಿನಲ್ಲಿರುವ ಬೋರಿನ ಮನೆಯಲ್ಲಿ ಬಂದೂಕನ್ನು ಇಡುತ್ತಿದ್ದರು. 2025ರ ಡಿಸೆಂಬರ್ 31ರ ಸಂಜೆ ಅವರು ಕೊನೆಯ ಬಾರಿ ಬಂದೂಕನ್ನು ಬಳಸಿದ್ದರು. ಜನವರಿ 1ರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಬೋರಿನ ಮನೆಗೆ ತೆರಳಿದಾಗ ಬಂದೂಕು ಕಾಣೆಯಾಗಿರುವುದು ತಿಳಿದುಬಂದಿದೆ. ತಕ್ಷಣವೇ ಕುಟುಂಬದವರು ಹಾಗೂ ಸಂಬಂಧಿಕರ ಬಳಿ ವಿಚಾರಣೆ ನಡೆಸಿ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ವಿ.ಎಸ್. ಪಾಟೀಲ್ ಅವರು ಮುಂಡಗೋಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸ್ವ ರಕ್ಷಣೆಗಾಗಿ ಪಡೆದಿದ್ದ ಬಂದೂಕು ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಡಗೋಡು ಪೊಲೀಸರು ಕಳ್ಳತನಗೊಂಡ ಬಂದೂಕಿನ ಪತ್ತೆಗೆ ತನಿಖೆ ಹಾಗೂ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
