ಕರಾವಳಿ ವಾಯ್ಸ್ ನ್ಯೂಸ್

ಗೋಕರ್ಣ: ಗುರುವಾರ ಮಧ್ಯಾಹ್ನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಸಮುದ್ರದ ಬಲವಾದ ಸುಳಿಗೆ ಸಿಲುಕಿದ್ದು, ಜೀವ ರಕ್ಷಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಅವನ ಪ್ರಾಣಾಪಾಯ ತಪ್ಪಿದೆ.

ರಕ್ಷಣೆ ಪಡೆಯಲಾದ ಪ್ರವಾಸಿಗನು ದಾವಣಗೆರೆ ಜಿಲ್ಲೆಯ ಪರಶುರಾಮ ರಾಜಪ್ಪ (21) ಆಗಿದ್ದು, ದಾವಣಗೆರೆ ಮೂಲದ ಆರು ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದನು. ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಆಕಸ್ಮಿಕವಾಗಿ ಸುಳಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾದನು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜೀವ ರಕ್ಷಕ ಸಿಬ್ಬಂದಿಗಳಾದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ ಹಾಗೂ ಮೋಹನ ಅಂಬಿಗ ಅವರು ತಕ್ಷಣ ಸಮುದ್ರಕ್ಕೆ ಧಾವಿಸಿ ಪ್ರವಾಸಿಗನನ್ನು ಸುರಕ್ಷಿತವಾಗಿ ಹೊರತೆಗೆದರು. ಈ ರಕ್ಷಣಾ ಕಾರ್ಯಾಚರಣೆಗೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸಕಟ್ಟ, ಜೆಸ್ಕಿ ಡ್ರೈವರ್ ದರ್ಶನ್ ಲಕ್ಕುಮನೆ, ದೀಪಕ್ ಗೌಡ ಹಾಗೂ ಗೃಹರಕ್ಷಕ ಸಿಬ್ಬಂದಿ ಲಿಂಗರಾಜ ಗೌಡ ಅವರು ಸಹಕಾರ ನೀಡಿದರು.

ಗಮನಾರ್ಹವಾಗಿ, ಇದಕ್ಕೂ ಮೊದಲು ಮಂಗಳವಾರವೂ ಗೋಕರ್ಣ ಕಡಲತೀರದಲ್ಲಿ ಸಮುದ್ರದ ಸುಳಿಗೆ ಸಿಲುಕಿದ್ದ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ಸಾಹಸಿಕವಾಗಿ ರಕ್ಷಿಸಿದ್ದರು. ನಿರಂತರವಾಗಿ ಇಂತಹ ಅಪಾಯಕಾರಿ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಜೀವ ರಕ್ಷಕ ಸಿಬ್ಬಂದಿ ಮನವಿ ಮಾಡಿದ್ದಾರೆ.

ಸಮಯೋಚಿತ ಹಾಗೂ ಧೈರ್ಯಪೂರ್ಣ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದ್ದು, ಜೀವ ರಕ್ಷಕ ಸಿಬ್ಬಂದಿಯ ಸೇವಾಭಾವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

Please Share: