ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ತಾಲೂಕಿನ ಅನಿಲಗೋಡ ಹೊಳೆಬದಿಕೇರಿ ಗ್ರಾಮದಲ್ಲಿ ಜೇನುಹುಳ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಅನಿಲಗೋಡ ಹೊಳೆಬದಿಕೇರಿಯ ನಿವಾಸಿ ಮಂಜುನಾಥ ಗಣಪ ಅಂಬಿಗ (53) ಎಂದು ಗುರುತಿಸಲಾಗಿದೆ.

ಮಂಜುನಾಥ ಅಂಬಿಗ ಅವರು ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ಬೇರಂಕಿ ಗ್ರಾಮಕ್ಕೆ ಕೃಷಿ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ, ಅನಿಲಗೋಡ ಜನತಾ ವಿದ್ಯಾಲಯದ ಹಿಂಭಾಗದಲ್ಲಿ ಅಚಾನಕ್ ಜೇನುಹುಳಗಳ ಗುಂಪು ದಾಳಿ ನಡೆಸಿದೆ. ಜೇನುಹುಳಗಳು ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಮರುಮರು ಕಡಿದ ಪರಿಣಾಮ ಅವರು ತೀವ್ರ ಅಸ್ವಸ್ಥರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲನೆ ನಡೆಸಿದ ಬಳಿಕ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಜೇನುಹುಳಗಳ ತೀವ್ರ ದಾಳಿಯಿಂದ ಉಂಟಾದ ಶಾಕ್ ಹಾಗೂ ಉಸಿರಾಟದ ತೊಂದರೆ ಸಾವಿಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಮೃತ ಮಂಜುನಾಥ ಅಂಬಿಗ ಅವರು ಕುಟುಂಬದ ಆಧಾರಸ್ತಂಭರಾಗಿದ್ದು, ಅವರ ಅಕಾಲಿಕ ಮರಣದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಳವಾದ ದುಃಖ ಆವರಿಸಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜೇನುಹುಳ ದಾಳಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ವಿಶೇಷವಾಗಿ ಶಾಲಾ ಆವರಣಗಳು, ಕಾಡು ಪ್ರದೇಶಗಳು ಹಾಗೂ ಹೊಳೆ ತಟಗಳ ಬಳಿ ಸಂಚರಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಗತ್ಯತೆ ಮತ್ತೆ ಒತ್ತಿ ಹೇಳಲಾಗಿದೆ.

Please Share: