ಕರಾವಳಿ ವಾಯ್ಸ್ ನ್ಯೂಸ್ 

ಗೋಕರ್ಣ: 2026ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೋಕರ್ಣ ಮೂಲದ ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿ ಪ್ರತ್ಯೂಷಾ ಕುಮಾರ್ ಆಯ್ಕೆಯಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಮೂಲತಃ ಗೋಕರ್ಣದ ರಥಬೀದಿಯ ಜಂಭೆ ಮನೆತನದವರಾದ ಪ್ರತ್ಯೂಷಾ ಕುಮಾರ್ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ತಮ್ಮ 14ನೇ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡವರು. ನಿರಂತರ ಪರಿಶ್ರಮ ಮತ್ತು ಸಾಧನೆಯ ಮೂಲಕ ಹಂತ ಹಂತವಾಗಿ ಮುನ್ನಡೆದ ಅವರು ರಾಜ್ಯಮಟ್ಟದ ವಿವಿಧ ಪಂದ್ಯಾವಳಿಗಳಲ್ಲಿ ಗಮನ ಸೆಳೆದಿದ್ದರು. ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.

10 ಲಕ್ಷ ರೂ.ಗೆ ಆರ್‌ಸಿಬಿ ಒಪ್ಪಂದ

26 ವರ್ಷದ ಪ್ರತ್ಯೂಷಾ ಕುಮಾರ್ ಒಬ್ಬ ನಿಪುಣ ವಿಕೆಟ್‌ಕೀಪರ್ ಹಾಗೂ ಆಕ್ರಮಣಕಾರಿ ಬಲಗೈ ಬ್ಯಾಟರ್ ಆಗಿದ್ದಾರೆ. ವಿಕೆಟ್‌ಗಳ ಹಿಂದೆ ಚುರುಕಾದ ಕೀಪಿಂಗ್ ಕೌಶಲ್ಯ ಮತ್ತು ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಶೈಲಿಯುಳ್ಳ ಇವರ ಸಾಮರ್ಥ್ಯವನ್ನು ಗಮನಿಸಿದ ಆರ್‌ಸಿಬಿ ಫ್ರಾಂಚೈಸಿಯು 10 ಲಕ್ಷ ರೂಪಾಯಿ ಮೊತ್ತಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಡಬ್ಲ್ಯೂಪಿಎಲ್‌ನಲ್ಲಿ ಪ್ರತ್ಯೂಷಾ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸದ ‘ಅನ್‌ಕ್ಯಾಪ್ಡ್’ ಆಟಗಾರ್ತಿಯಾಗಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ಗಳಿಸಿರುವ ಅನುಭವ ಮತ್ತು ಸ್ಥಿರ ಪ್ರದರ್ಶನವೇ ಆರ್‌ಸಿಬಿ ತಂಡದ ಗಮನ ಸೆಳೆದಿದೆ.

ತಮ್ಮೂರಿನ ಹುಡುಗಿ ಪ್ರತಿಷ್ಠಿತ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಗೋಕರ್ಣಕ್ಕೆ ಮಾತ್ರವಲ್ಲದೆ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಪ್ರತ್ಯೂಷಾ ಕುಮಾರ್ ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡಲಿ, ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಸ್ಥಳೀಯರು, ಕ್ರೀಡಾಭಿಮಾನಿಗಳು ಹಾಗೂ ಯುವ ಕ್ರೀಡಾಳುಗಳು ಹಾರೈಸಿದ್ದಾರೆ.

 

Please Share: