ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯಕ್ಕೆ ಒಳಗಾಗಿದ್ದ ಇಬ್ಬರು ಪ್ರವಾಸಿಗರನ್ನು ಕರ್ತವ್ಯ ನಿರತ ಜೀವರಕ್ಷಕ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಗುಲ್ಬರ್ಗ ಜಿಲ್ಲೆಯ ವಾಡಿ ತಾಲೂಕಿನ ಸಂಗಮೇಶ್ ರಾಜಪ್ಪ ಪಾಟೀಲ್ (23) ಹಾಗೂ ಬೀದರ್ ಜಿಲ್ಲೆಯ ಜಯಪ್ರಕಾಶ್ (23) ಎಂಬವರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆಳವಾದ ಸುಳಿಗೆ ಸಿಲುಕಿಕೊಂಡು ಸಹಾಯಕ್ಕಾಗಿ ಕೂಗಿದರು. ವಿಷಯ ಗಮನಿಸಿದ ಜೀವರಕ್ಷಕ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತಂದರು.
ಕರ್ತವ್ಯದಲ್ಲಿದ್ದ ಜೀವರಕ್ಷಕರಾದ ರೋಷನ್ ಖಾರ್ವಿ, ಶಿವಪ್ರಸಾದ ಅಂಬಿಗ, ಮೋಹನ ಅಂಬಿಗ, ಲೋಕೇಶ್ ಹರಿಕಂತ್ರ ಅವರೊಂದಿಗೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್ ಹಾಗೂ ಪ್ರವಾಸಿ ಮಿತ್ರರಾದ ಶೇಖರ್ ಹರಿಕಂತ್ರ ಮತ್ತು ಗಜೇಂದ್ರ ಗೌಡ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಇದೇ ವೇಳೆ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಜಗ್ಗು ಹರಿಕಂತ್ರ, ಮಹೇಶ್ ಹರಿಕಂತ್ರ, ಕಮಲಾಕರ ಹೊಸಕಟ್ಟ, ಸಚಿನ್ ಹರಿಕಂತ್ರ, ಮಹಾಬಲೇಶ್ವರ ಹರಿಕಂತ್ರ ಹಾಗೂ ಗೃಹ ರಕ್ಷಕ ಸಿಬ್ಬಂದಿಯಾದ ಗಜಾನನ್ ನಾಗೇಕರ್ ರಕ್ಷಣಾ ಕಾರ್ಯಚರಣೆಗೆ ಸಹಕಾರ ನೀಡಿದರು.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಒಟ್ಟು 10 ಜನ ಸ್ನೇಹಿತರು ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದು, ಕಡಲತೀರದಲ್ಲಿ ಈಜಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಮಯೋಚಿತ ರಕ್ಷಣೆಯಿಂದ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
