ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ಸುಳಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡಿದ್ದಾರೆ.
ಘಟನೆಯಲ್ಲಿ ಕಾರು ಹಾಗೂ ಅದರೊಳಗಿದ್ದ ಇಬ್ಬರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಪ್ರಾಥಮಿಕ ಮಾಹಿತಿಯಂತೆ, ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಡಿಕ್ಕಿಯ ತಕ್ಷಣವೇ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದು, ಬೆಂಕಿಯ ತೀವ್ರತೆಗೆ ಕಾರಿನ ನಂಬರ್ ಪ್ಲೇಟ್ ಸಹ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದರಿಂದ ವಾಹನದ ನೋಂದಣಿ ವಿವರಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಪರಿಶೀಲನೆ ನಡೆಸಿದರು. ಸದ್ಯ ಕಾರು ಹಾಗೂ ಮೃತಪಟ್ಟವರ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.
