ಕರಾವಳಿ ವಾಯ್ಸ್ ನ್ಯೂಸ್
ನವದೆಹಲಿ: ಮದುವೆಯಾದ ಮಹಿಳೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದರೆ, ಆ ಮಗುವಿನ ಕಾನೂನುಬದ್ಧ ತಂದೆ ಯಾರು ಎನ್ನುವ ಪ್ರಶ್ನೆಗೆ ಸುಪ್ರೀಂಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಮಾನ್ಯ ವಿವಾಹದ ಅವಧಿಯಲ್ಲಿ ಜನಿಸುವ ಮಗು ಮಹಿಳೆಯ ಕಾನೂನುಬದ್ಧ ಪತಿಯದ್ದೇ ಎಂದು ಕಾನೂನು ಊಹಿಸುತ್ತದೆ ಎಂದು ತೀರ್ಪು ನೀಡಿದೆ.
ವಿವಾಹಿತೆಯು ಅಕ್ರಮ ಸಂಬಂಧ ಹೊಂದಿದ್ದರೂ, ಮದುವೆಯ ನಂತರ ಪತಿ–ಪತ್ನಿ ನಡುವೆ ದೈಹಿಕ ಸಂಪರ್ಕ ಇದ್ದಿದ್ದರೆ, ಆ ಮಗುವಿನ ತಂದೆ ಎಂದು ಕಾನೂನುಬದ್ಧ ಪತಿಯನ್ನೇ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಮಗುವಿನ ಜೈವಿಕ ಪಿತೃತ್ವಕ್ಕಿಂತಲೂ, ಮಗುವಿನ ಘನತೆ, ಗೌರವ ಮತ್ತು ಭದ್ರತೆಯನ್ನು ಕಾಪಾಡುವುದು ಮುಖ್ಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ದೈಹಿಕ ಸಂಪರ್ಕ ಇಲ್ಲದಿದ್ದರೆ ಮಾತ್ರ ವಿಚಾರಣೆ
ಆದರೆ, ಮದುವೆಯಾದ ನಂತರ ದಂಪತಿ ನಡುವೆ ಗರ್ಭಧಾರಣೆಗೆ ಕಾರಣವಾಗುವ ರೀತಿಯ ದೈಹಿಕ ಸಂಪರ್ಕವೇ ನಡೆದಿಲ್ಲ ಎಂಬುದನ್ನು ಪತಿ ಸಾಬೀತುಪಡಿಸಿದಲ್ಲಿ ಮಾತ್ರ, ಕಾನೂನು ರೀತ್ಯಾ ವಿಚಾರಣೆ ನಡೆಸಲು ಅವಕಾಶವಿದೆ ಎಂದು ಕೋರ್ಟ್ ಹೇಳಿದೆ. ಆದರೆ ಕೇವಲ ಪತ್ನಿಯನ್ನು ವ್ಯಭಿಚಾರಿಣಿ ಎಂದು ಆರೋಪಿಸುವುದು ಅಥವಾ ಡಿಎನ್ಎ ಪರೀಕ್ಷೆ ಮೂಲಕ ಪಿತೃತ್ವ ಪ್ರಶ್ನಿಸುವುದು ಸಮ್ಮತವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಮಗುವಿನ ಹಿತಾಸಕ್ತಿಯೇ ಮುಖ್ಯ
ಸೆಕ್ಷನ್ 112 ರ ಉದ್ದೇಶವೇ ಯಾವುದೇ ತಪ್ಪು ಮಾಡದ ಮಗುವನ್ನು ಸಾಮಾಜಿಕ ಕಳಂಕದಿಂದ ರಕ್ಷಿಸುವುದಾಗಿದೆ. ಆದ್ದರಿಂದ, ಮಗುವಿನ ನಿಜವಾದ ಜೈವಿಕ ತಂದೆ ಯಾರು ಎನ್ನುವುದು ಕಾನೂನಿನ ದೃಷ್ಟಿಯಲ್ಲಿ ಅಷ್ಟೇನೂ ಮಹತ್ವ ಪಡೆಯುವುದಿಲ್ಲ. ಮಹಿಳೆಯ ಕಾನೂನುಬದ್ಧ ಪತಿಯೇ ಮಗುವಿನ ತಂದೆ ಎನ್ನುವ ತತ್ವವನ್ನು ಕಾನೂನು ಬಲಪಡಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಡಿಎನ್ಎ ಪರೀಕ್ಷೆಗೆ ಆದೇಶಿಸುವಂತಿಲ್ಲ
ಇಂಥ ಪ್ರಕರಣಗಳಲ್ಲಿ ಪಿತೃತ್ವವನ್ನು ನಿರಾಕರಿಸಲು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಆದೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಮಗುವಿನ ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವುದು ಹಾಗೂ ಕುಟುಂಬದ ಖಾಸಗಿ ವಿಚಾರಗಳನ್ನು ಹೊರಗೆಳೆದು ಮಗುವಿಗೆ ಕಳಂಕ ತರದಂತೆ ತಡೆಯುವುದು ಈ ಕಾನೂನು ನಿಯಮದ ಮೂಲ ಉದ್ದೇಶವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
