ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಕಾತೂರು ಅರಣ್ಯ ವಲಯದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಅಪರೂಪದ ದೈತ್ಯ ಹಾರುವ ಅಳಿಲು (Giant Flying Squirrel) ಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸಮಯೋಚಿತವಾಗಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಶಿರಸಿ–ಕೋಡಂಬಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದ ಅಳಿಲನ್ನು ಅಧಿಕಾರಿಗಳು ಗಮನಿಸಿದ್ದಾರೆ. ಮಲೆನಾಡು ಪ್ರದೇಶದಲ್ಲಿ “ಹಾರುವ ಬೆಕ್ಕು” ಎಂದೇ ಖ್ಯಾತಿ ಪಡೆದಿರುವ ಈ ಅಪರೂಪದ ಪ್ರಾಣಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಾರಲು ಅಸಮರ್ಥವಾಗಿ ಒದ್ದಾಡುತ್ತಿದ್ದ ದೃಶ್ಯ ಕರುಣೆ ಮೂಡಿಸಿತು.

ತಕ್ಷಣವೇ ಎಚ್ಚೆತ್ತುಕೊಂಡ ಕಾತೂರು ಉಪ ವಲಯ ಅರಣ್ಯಾಧಿಕಾರಿ ಸುನೀಲ ಅವರ ಮಾರ್ಗದರ್ಶನದಲ್ಲಿ ಅರಣ್ಯ ವೀಕ್ಷಕ ಬಸವರಾಜ ವಾಲ್ಮೀಕಿ ಹಾಗೂ ವಾಹನ ಚಾಲಕ ಕೃಷ್ಣ ಅವರು ಅಳಿಲನ್ನು ಸುರಕ್ಷಿತವಾಗಿ ಹಿಡಿದು ಪ್ರಾಥಮಿಕ ಆರೈಕೆ ಒದಗಿಸಿದರು. ಅಗತ್ಯವಾದ ವಿಶ್ರಾಂತಿ ಹಾಗೂ ಚಿಕಿತ್ಸೆ ನೀಡಿದ ಬಳಿಕ, ಅಳಿಲಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಅದರ ಸಹಜ ವಾಸಸ್ಥಳವಾದ ಅರಣ್ಯ ಪ್ರದೇಶದಲ್ಲೇ ಬಿಡಲಾಯಿತು.

ಅರಣ್ಯ ಇಲಾಖೆಯ ಈ ಕಾರ್ಯವನ್ನು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅಪರೂಪದ ಹಾಗೂ ಸಂರಕ್ಷಿತ ಪ್ರಭೇದಕ್ಕೆ ಸೇರಿದ ದೈತ್ಯ ಹಾರುವ ಅಳಿಲಿನ ರಕ್ಷಣೆ ಮೂಲಕ ಅರಣ್ಯ ಜೀವ ವೈವಿಧ್ಯ ಸಂರಕ್ಷಣೆಯ ಮಹತ್ವ ಮತ್ತೊಮ್ಮೆ ಎತ್ತಿಹಿಡಿದಂತಾಗಿದೆ.

ಅರಣ್ಯಾಧಿಕಾರಿಗಳು ಮಾತನಾಡಿ, “ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ತೊಂದರೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಅನೇಕ ಅಮೂಲ್ಯ ಜೀವಿಗಳನ್ನು ಉಳಿಸಬಹುದು” ಎಂದು ಮನವಿ ಮಾಡಿದ್ದಾರೆ.

Please Share: