ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಅಡುಗೆ ಅನಿಲ ಸಿಲಿಂಡರ್ ದುರಸ್ತಿ ಮಾಡುವ ವೇಳೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡು ಐದು ವರ್ಷದ ಬಾಲಕನನ್ನು ಸೇರಿಸಿ ಆರು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಕೇಣಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ.

ಕೇಣಿಯ ಗಾಂವ್ಕರವಾಡದ ನಿವಾಸಿ ಗೌರೀಶ ನಾಯಕ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಸುದರ್ಶನ ನಾಯ್ಕ ಅವರ ಅಡುಗೆ ಅನಿಲ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದುರಸ್ತಿಗಾಗಿ ಅನಿಲ ಸರಬರಾಜು ಕಂಪನಿಯ ಸಿಬ್ಬಂದಿ ಶ್ರವಣ ಬಂಟ್ ಅವರನ್ನು ಕರೆಸಲಾಗಿತ್ತು. ದುರಸ್ತಿ ಕಾರ್ಯ ನಡೆಯುತ್ತಿದ್ದ ಸಮಯದಲ್ಲಿ ಸಿಲಿಂಡರ್ ಏಕಾಏಕಿ ಭಾರೀ ಶಬ್ದದೊಂದಿಗೆ ಸ್ಪೋಟಗೊಂಡಿದೆ.

ಸ್ಪೋಟದ ಪರಿಣಾಮವಾಗಿ ಮನೆಗೆ ಸಮೀಪ ಆಟವಾಡುತ್ತಿದ್ದ ಗೌರೀಶ ನಾಯಕರ ಮೊಮ್ಮಗ ಕೃಷ್ಣ ನಾಯಕ (5), ಬಾಡಿಗೆದಾರ ಸುದರ್ಶನ ನಾಯ್ಕ ಹಾಗೂ ದುರಸ್ತಿಗೆ ಬಂದಿದ್ದ ಶ್ರವಣ ಬಂಟ್ ಅವರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ವೇಳೆ ಮನೆಯಲ್ಲಿದ್ದ ಇನ್ನೂ ನಾಲ್ವರು ಸದಸ್ಯರಿಗೆ ಗಾಯಗಳಾಗಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಅಂಕೋಲಾ ಪೊಲೀಸ್ ಠಾಣೆಯ ಪಿಎಸೈಗಳಾದ ವಿಶ್ವನಾಥ್ ನಿಂಗೊಳ್ಳಿ ಹಾಗೂ ಸುನೀಲ್ ಹುಳ್ಳೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಪಟ್ಟಣದ ಆರ್ಯ ಮೆಡಿಕಲ್ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ.

 

 

Please Share: