ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಅವರ್ಸಾ ದಂಡೆಬಾಗದಲ್ಲಿ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಜ್ಜಿ ಮನೆಗೆ ಹೋಗಿ ಕೆಲವು ದಿನ ಉಳಿದುಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಟ ಯುವತಿ, ಅಜ್ಜಿ ಮನೆಗೂ ತಲುಪದೆ, ಮನೆಗೂ ಮರಳಿ ಬಾರದೇ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಣೆಯಾದ ಯುವತಿಯನ್ನು ಮೇಘನಾ ನಾಗೇಂದ್ರ ನಾಯ್ಕ (22) ಎಂದು ಗುರುತಿಸಲಾಗಿದೆ. ಜನೆವರಿ 2ರಂದು ಅವರ್ಸಾ ದಂಡೆಬಾಗದಲ್ಲಿರುವ ತನ್ನ ಮನೆಯಿಂದ ರಾಮನಗುಳಿಯಲ್ಲಿರುವ ಅಜ್ಜಿ ಮನೆಗೆ ಹೋಗುವದಾಗಿ ಹೇಳಿ ಹೊರಟಿದ್ದಾಳೆ. ಆದರೆ ಆಕೆ ಅಜ್ಜಿ ಮನೆಗೆ ಹೋಗದೇ, ಬಳಿಕ ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ.
ಯುವತಿಯ ಗೈರುಹಾಜರಿಯಿಂದ ಆತಂಕಗೊಂಡ ಮನೆಯವರು ಸಂಬಂಧಿಕರು ಹಾಗೂ ಪರಿಚಿತರಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಆಕೆಯ ತಂದೆ ನಾಗೇಂದ್ರ ಮಹಾಬಲೇಶ್ವರ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ನಾಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಮೇಘನಾ ಸುಮಾರು 5 ಅಡಿ ಎತ್ತರ ಹೊಂದಿದ್ದು, ಸಾದಾ ಕಪ್ಪು ಮೈಬಣ್ಣ, ಗೋಲು ಮುಖ, ಕಪ್ಪು ಕೂದಲು ಹೊಂದಿದ್ದಾಳೆ. ಮನೆ ಬಿಟ್ಟು ಹೊರಟ ಸಮಯದಲ್ಲಿ ಹಸಿರು ಬಣ್ಣದ ಚೂಡಿದಾರ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಳು. ಆಕೆ ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡಬಲ್ಲವಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಾಪತ್ತೆ ಪ್ರಕರಣದಿಂದ ಅವರ್ಸಾ ದಂಡೆಬಾಗ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯುವತಿಯು ಸುರಕ್ಷಿತವಾಗಿ ಪತ್ತೆಯಾಗಲೆಂದು ಕುಟುಂಬಸ್ಥರು ಆಶಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಸ್ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳು ಹಾಗೂ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವ ಕೆಲಸ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-230333 ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
