ಕರಾವಳಿ ವಾಯ್ಸ್ ನ್ಯೂಸ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ವೇಪ್ಸ್‌ಗಳನ್ನು ವಶಪಡಿಸಿಕೊಂಡು, ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.

ಭಟ್ಕಳ ಶಹರದ ಹೂವಿನ ಚೌಕ್ ಸಮೀಪದ ದುಬೈ ಮಾರ್ಕೆಟ್‌ನಲ್ಲಿರುವ ಅಂಗಡಿಯೊಂದರ ಮೇಲೆ ಜನವರಿ 01ರ ರಾತ್ರಿ ದಾಳಿ ನಡೆಸಿದ ಪೊಲೀಸರು, ಒಟ್ಟು 1,38,500 ರೂ. ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಪರವಾನಿಗೆ ಅಥವಾ ಅನುಮತಿ ಇಲ್ಲದೆ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಾಪಾರಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ (ತಂದೆ: ಸಿದ್ದಿಕ್ ಖಾದಿರ ಮೀರಾ) ಎಂದು ಗುರುತಿಸಲಾಗಿದ್ದು, ಭಟ್ಕಳದ ಕಾರಗದ್ದೆ 2ನೇ ಕ್ರಾಸ್ ನಿವಾಸಿಯಾಗಿದ್ದಾನೆ. ವೃತ್ತಿಯಿಂದ ವ್ಯಾಪಾರಿಯಾಗಿರುವ ಆರೋಪಿತನ ಅಂಗಡಿಯ ಪರಿಶೀಲನೆಯಲ್ಲಿ 76,000 ರೂ. ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಹಾಗೂ 62,500 ರೂ. ಮೌಲ್ಯದ 125 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು (ವೇಪ್ಸ್) ಪತ್ತೆಯಾಗಿವೆ. ಇವುಗಳನ್ನು ಮಾರಾಟ ಮಾಡಲು ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದಿರುವುದು ದೃಢಪಟ್ಟಿದೆ.

ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 01/2026, ಕಲಂ 7 ಮತ್ತು 8ರ ಅಡಿಯಲ್ಲಿ Prohibition of Electronic Cigarettes Act–2019ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆ ಪೊಲೀಸ್ ಉಪಾಧೀಕ್ಷಕರು ಮಹೇಶ್ ಎಂ.ಕೆ ಅವರ ಮಾರ್ಗದರ್ಶನದಲ್ಲಿ, ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀನ ನಾಯ್ಕ ಸೇರಿದಂತೆ ಸಿಬ್ಬಂದಿಗಳಾದ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ್ ಮರಾಠಿ, ಜಗದೀಶ ನಾಯ್ಕ ಹಾಗೂ ರೇವಣಸಿದ್ದಪ್ಪ ಮಾಗಿ ಪಾಲ್ಗೊಂಡಿದ್ದರು.

 

 

Please Share: