ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಕರ್ತವ್ಯ ಲೋಪ ಹಾಗೂ ವರ್ತನೆ ಸಂಬಂಧ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ಸಹಶಿಕ್ಷಕ ದಾಸಪ್ಪ ಎ. ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಡಿ.ಆರ್. ನಾಯ್ಕ ತಿಳಿಸಿದ್ದಾರೆ.
ಚಿಗಳ್ಳಿಯ ದೇವಕ್ಕ ಛಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಾಸಪ್ಪರ ವಿರುದ್ಧ ಅಲ್ಲಿ ಸೇವೆಯಲ್ಲಿದ್ದ ಮಹಿಳಾ ಶಿಕ್ಷಕಿಯರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇತ್ತೀಚೆಗೆ ಮಹಿಳಾ ದೌರ್ಜನ್ಯ ಆರೋಪ ಆಧಾರವಾಗಿ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (SDMC) ಅಧ್ಯಕ್ಷ ಸಂತೋಷ ಚಿಗಳ್ಳಿಯವರೂ ಕೊಲೆ ಬೆದರಿಕೆ ನೀಡಿದ ಆರೋಪದಂತೆ ದೂರು ನೀಡಿದ್ದಾರೆ.
ಈ ಘಟನೆಗಳ ನಡುವೆ ಗ್ರಾಮಸ್ಥರು ಕೂಡ ಶಿಕ್ಷಕನ ವಿರುದ್ಧ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸರಣಿ ದೂರುಗಳು ಮತ್ತು ಆರೋಪಗಳ ಹಿನ್ನೆಲೆ ವಿಷಯವನ್ನು ಪರಿಶೀಲಿಸಿದ ನಂತರ ಡಿಡಿಪಿಐ ಅವರು ಅಮಾನತ್ತು ಆದೇಶ ಹೊರಡಿಸಿರುವ ಮಾಹಿತಿ ಲಭ್ಯವಾಗಿದೆ.
ಇದಕ್ಕೂ ಪ್ರತಿಯಾಗಿ, ಅಮಾನತ್ತುಗೊಂಡಿರುವ ಶಿಕ್ಷಕ ದಾಸಪ್ಪ ಎ. ಕೂಡ SDMC ಅಧ್ಯಕ್ಷರು ಮತ್ತು ಶಿಕ್ಷಕಿಯರ ವಿರುದ್ಧ ಜಾತಿ ನಿಂದನೆ ಆರೋಪದ ಪ್ರಕರಣ ದಾಖಲಿಸಿರುವುದು ತಿಳಿದುಬಂದಿದೆ.

