ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಮೇಲ್ಗಟ್ಟ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿ ಮುಳುಗುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ಶೌರ್ಯದಿಂದ ರಕ್ಷಿಸಿದ ಘಟನೆ ಶನಿವಾರ ಸಂಭವಿಸಿದೆ.
ಒಟ್ಟು 39 ಮಂದಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದ ಅವರು, ಲೈಫ್ ಗಾರ್ಡ್‌ಗಳ ಪುನ:ಪುನಃ ಎಚ್ಚರಿಕೆಗಳನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಿಯಾಜ್ ಅಹಮದ್ (15), ಮೊಹಮ್ಮದ್ ಜಿಲಾಲ್ (15), ಆಕಾಶ್ (15) ಸೇರಿದಂತೆ ಹತ್ತನೇ ತರಗತಿಯ ಮೂವರು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕರು ಕಡಲಿನ ಬಲವಾದ ಸುಳಿಗೆ ಸಿಲುಕಿ ಮುಳುಗುವ ಪರಿಸ್ಥಿತಿ ಉಂಟಾಯಿತು.
ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ ಮತ್ತು ರೋಷನ್ ಖಾರ್ವಿ ತಕ್ಷಣ ಸಮುದ್ರಕ್ಕೆ ಜಿಗಿದು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಗೋಕರ್ಣ ಮುಖ್ಯ ಕಡಲ ತೀರದ ವಾಟರ್ ಸ್ಪೋರ್ಟ್ಸ್ ತಂಡದ ದರ್ಶನ್ ಹರಿಕಾಂತ್, ಚಿದಾನಂದ ಲಕ್ಕುಮನೆ, ದೀಪಕ್ ಗೌಡ, ಅಶೋಕ್ ಹರಿಕಾಂತ್, ಮಹೇಶ್ ಹರಿಕಾಂತ್, ಜಗ್ಗು ಹರಿಕಾಂತ್, ಕಮಲಾಕರ ಹೊಸ್ಕಟ್ಟ ಸಹಕಾರ ನೀಡಿದ್ದಾರೆ.
ತ್ವರಿತ ಮತ್ತು ಧೈರ್ಯಶಾಲಿ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದ ಹಿನ್ನೆಲೆಯಲ್ಲಿ ಲೈಫ್ ಗಾರ್ಡ್ ಹಾಗೂ ವಾಟರ್ ಸ್ಪೋರ್ಟ್ಸ್ ತಂಡದ ಕಾರ್ಯ ಶ್ಲಾಘನೀಯವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

