ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ 40ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ತಾಲೂಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮಧ್ಯಾಹ್ನದ ಊಟದ ಕೆಲವು ನಿಮಿಷಗಳಲ್ಲೇ ಕೆಲ ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿ ತೊಂದರೆ ಕಾಣಿಸಿಕೊಂಡಿದ್ದು, ವಿಷಯ ತಿಳಿದ ತಕ್ಷಣ ಶಾಲೆಗೆ ಧಾವಿಸಿದ ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಒದಗಿಸಿದರು. ಬಿಸಿಯೂಟದಲ್ಲಿ ಇಲಿಯ ಹಿಕ್ಕೆ ಮಿಶ್ರಣವಾಗಿರುವುದು ಅಸ್ವಸ್ಥತೆಗೆ ಕಾರಣ ಎಂಬ ಆರೋಪವನ್ನು ಕೆಲ ಪಾಲಕರು ಮಾಡಿದ್ದಾರೆ.

ಶಾಸಕರ ಭೇಟಿ: ವಿಷಯ ತಿಳಿದ ಕೂಡಲೇ ಶಾಸಕ ಶಿವರಾಮ ಹೆಬ್ಬಾರ್ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ವೈದ್ಯಾಧಿಕಾರಿಗಳಿಗೆ ಅಗತ್ಯ ಎಲ್ಲಾ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಅಧಿಕಾರಿಗಳ ಪರಿಶೀಲನೆ: ತಾ.ಪಂ. ಇಒ ಟಿ.ವೈ. ದಾಸನಕೊಪ್ಪ, ಪ.ಪಂಚಾಯತ್ ಮುಖ್ಯಾಧಿಕಾರಿ ಸಂತೋಷಕುಮಾರ, ಮುಖ್ಯ ಶಿಕ್ಷಕ ವಿನೋದ ನಾಯಕ್ ಹಾಗೂ ಸಿಪಿಐ ರಂಗನಾಥ ನೀಲಮ್ಮನವರ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ವೈದ್ಯಾಧಿಕಾರಿಗಳ ಹೇಳಿಕೆ

“ಬಿಸಿಯೂಟದ ಬಳಿಕ ಹೊಟ್ಟೆನೋವು, ವಾಂತಿ ತೊಂದರೆ ಕಂಡು ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಒಂದು ದಿನ ನಿಗಾದಲ್ಲಿದ್ದು, ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಹೊರಗಿದ್ದಾರೆ. ನೀರು ಮತ್ತು ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ,” ಎಂದು ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ತಿಳಿಸಿದ್ದಾರೆ.

 

 

Please Share: