ಕರಾವಳಿ ವಾಯ್ಸ್ ನ್ಯೂಸ್
ಮುಂಬೈ: ಬಾಲಿವುಡ್‌ನ ಹಿರಿಯ ನಟ ಮತ್ತು ‘ಹೀ-ಮ್ಯಾನ್’ ಎಂದೇ ಜನಪ್ರಿಯರಾಗಿದ್ದ ಧರ್ಮೇಂದ್ರ (89) ಅವರು ಸೋಮವಾರ ಅಗಲಿರುವುದಾಗಿ ವರದಿಯಾಗಿದೆ. ಅವರ ನಿಧನದ ಸುದ್ದಿಯಿಂದ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ.
ಕಳೆದ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಇಂದು(ಸೋಮವಾರ) ಬೆಳಗ್ಗೆ ಅವರ ಜೀವಪಯಣ ಅಂತ್ಯಗೊಂಡಿರುವ ಮಾಹಿತಿ ಬಂದಿದೆ.
ಇತ್ತೀಚೆಗೆ ಅವರ ಸಾವಿನ ಬಗ್ಗೆ ಹರಿದಿದ್ದ ವದಂತಿಗಳನ್ನು ಕುಟುಂಬ ತಳ್ಳಿ ಹಾಕಿದ್ದರೂ, ಈ ಬಾರಿ ಬಂದ ಮಾಹಿತಿ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ.
ಧರ್ಮೇಂದ್ರ ತಮ್ಮ ದೀರ್ಘ ಕಲಾಜೀವನದಲ್ಲಿ ಶೋಲೆ, ಚುಪ್ಕೆ ಚುಪ್ಕೆ, ಯಮ್ಲಾ ಪಗ್ಲಾ ದೀವಾನಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು. ಆಕ್ಷನ್ ಸಿನಿಮಾಗಳಲ್ಲಿ ನೀಡಿದ ಶಕ್ತಿವಂತ ಅಭಿನಯದಿಂದಲೇ ಅವರಿಗೆ ‘ಆಕ್ಷನ್ ಕಿಂಗ್’ ಹಾಗೂ ‘ಹೀ-ಮ್ಯಾನ್’ ಎಂಬ ಬಿರುದುಗಳು ದೊರಕಿದ್ದವು.
ಚಲನಚಿತ್ರರಂಗದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದರು. 2004–2009 ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು.
ಕಲೆಯ ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆಯನ್ನು ಮಾನ್ಯಗೊಳಿಸಿ, 2012ರಲ್ಲಿ ಭಾರತ ಸರ್ಕಾರವು ಧರ್ಮೇಂದ್ರ ಅವರಿಗೆ ಪದ್ಮಭೂಷಣ ಗೌರವವನ್ನು ನೀಡಿ ಸನ್ಮಾನಿಸಿತ್ತು.
ಚಿತ್ರರಂಗಕ್ಕೆ ಅಳಿಸಲಾಗದ ಛಾಪು ಬಿಟ್ಟು ಹೋದ ಧರ್ಮೇಂದ್ರ ಅವರ ಅಗಲಿಕೆ ಅಭಿಮಾನಿಗಳು ಮತ್ತು ಸಹನಟರಲ್ಲಿ ಆಳವಾದ ದುಃಖ ಮೂಡಿಸಿದೆ.

