ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನೌಕರಿ ಕೊಡಿಸುವ ನೆಪದಲ್ಲಿ 15 ಲಕ್ಷ ರೂಪಾಯಿ ವಂಚನೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸ್‌ರು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.

2022ರಲ್ಲಿ ದೂರುದಾರ ವ್ಯಕ್ತಿಯ ಅಕ್ಕನ ಮಗನಿಗೆ ಕೆಪಿಟಿಸಿ‌ಎಲ್ ಇಲಾಖೆಯಲ್ಲಿ ಸೆಕೆಂಡ‍್ ಡಿವಿಷನ್ ಕ್ಲರ್ಕ್ ಹುದ್ದೆ ಕೊಡಿಸುವುದಾಗಿ ನಂಬಿಸಿ, ಹಂತ ಹಂತವಾಗಿ ಬ್ಯಾಂಕ್ ಹಾಗೂ ನಗದು ರೂಪದಲ್ಲಿ 15 ಲಕ್ಷ ರೂ. ಪಡೆದಿದ್ದರೂ ಯಾವುದೇ ನೌಕರಿ ಕೊಡಿಸದೇ, ಹಣ ಮರಳಿ ಕೇಳಿದಾಗ ಬೆದರಿಕೆ ಹಾಕಿದ್ದಾಗಿ ಪೀಡಿತರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಪರಾರಿಯಾಗಿದ್ದ ಹಿನ್ನೆಲೆ, ವಿಶೇಷ ಪತ್ತೆ ತಂಡವನ್ನು ರಚಿಸಿ ನವೆಂಬರ್ 15 ರಂದು ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನಲ್ಲಿ ದಾಳಿ ನಡೆಸಿ ಉಡುಪಿ ಮೂಲದ ವಿಜಯಕುಮಾರ ಕೆ. (44), ಬೆಂಗಳೂರು ಮೂಲದ ವಿಜಯ ಸಿ. (46) ಇವರನ್ನು ವಶಕ್ಕೆ ತೆಗೆದು ನ. 16ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ವಿಚಾರಣೆಯಲ್ಲಿ ಆರೋಪಿಗಳು ಹಣ ಪಡೆದು ಮೋಸ ಮಾಡಿದದ್ದು ಒಪ್ಪಿಕೊಂಡಿದ್ದು, ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರು ದೀಪನ್ ಎಂ.ಎನ್ (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಜಿ. ಕೃಷ್ಣಮೂರ್ತಿ ಹಾಗೂ ಎಂ. ಜಗದೀಶ್, ಉಪಾಧೀಕ್ಷಕರು ಮಹೇಶ ಕೆ. ಇವರ ಮಾರ್ಗದರ್ಶನದಲ್ಲಿ, ಠಾಣಾ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದ ತಂಡ — ಎಎಸ್‌ಐ ಗಿರೀಶ ಶೆಟ್ಟಿ, ಸಿ.ಪಿ.ಸಿ ಮನೋಜ್, ರವಿ ನಾಯ್ಕ, ಸಿಎಚ್‌ಸಿ ಗಜಾನನ ನಾಯ್ಕ, ವಿಠಲ ಗೌಡ, ಎಎಚ್‌ಸಿ ಚಂದ್ರಶೇಖರ ನಾಯ್ಕ ಯಶಸ್ವಿಯಾಗಿ ನಡೆಸಿದೆ.

ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ತೋರಿದ ವೃತ್ತಿಪರತೆ ಹಾಗೂ ಶ್ರದ್ಧೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇಲಾಖೆಯವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Please Share: