ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಸುಮಾರು ಆರು ತಿಂಗಳ ಹಿಂದೆ ಕಾರವಾರದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಹೊಂದಿಕೊಂಡಿದ್ದ ಕೊಠಡಿಯಲ್ಲಿ ಮಂಚ ಪತ್ತೆಯಾಗಿದೆ ಎಂಬ ನೆಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಇದೀಗ ಸಂಪೂರ್ಣವಾಗಿ ತಪ್ಪು ಅರ್ಥ ಹೊತ್ತದ್ದೆಂದು ದಾಖಲೆಗಳಿಂದ ಸ್ಪಷ್ಟವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ “ಕಚೇರಿಯಲ್ಲಿನ ಮಂಚ” ಎಂಬ ಶೀರ್ಷಿಕೆಯಲ್ಲಿ ವೈರಲ್ ಆದ ದೃಶ್ಯವು ಇಲಾಖೆ ವಿರುದ್ಧ ಅನಗತ್ಯ ವಿವಾದ ಹುಟ್ಟಿಸಿತ್ತು. ಇದೀಗ ಲಭ್ಯವಾದ ಅಧಿಕೃತ ಮಾಹಿತಿಯ ಪ್ರಕಾರ, ಆ ವಿಡಿಯೋ ಕತ್ತರಿಸಿ, ಭಾಗಶಃ ಚಿತ್ರಗಳನ್ನು ಮಾತ್ರ ಹೊರಬಿಟ್ಟುದರಿಂದ ಜನರಲ್ಲಿ ತಪ್ಪು ಕಲ್ಪನೆ ಮೂಡಿತ್ತು. ವಿಷಯದ ಮೂಲ ದಾಖಲೆಗಳ ಪ್ರಕಾರ, ಆ ಕೊಠಡಿಯಲ್ಲಿ ಕಂಡುಬಂದ ಎಲ್ಲಾ ವಸ್ತುಗಳು 2016ರಲ್ಲಿ ಪ್ರವಾಸೋದ್ಯಮ ಇಲಾಖೆ ಜಪ್ತಿ ಮಾಡಿಕೊಂಡದ್ದೇ ಆಗಿತ್ತು.

ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಪ್ರವಾಸೋದ್ಯಮ ಕಚೇರಿಯನ್ನು ಸ್ಥಳಾಂತರಿಸುವಾಗ ಸುರಕ್ಷತೆಗಾಗಿ ಸಂಪೂರ್ಣ ಸಾಮಗ್ರಿಗಳ ವಿಡಿಯೋ ದಾಖಲೆ ಮಾಡಲಾಗಿತ್ತು. ಆದರೆ ನಂತರ ಮಂಚದ ಭಾಗವನ್ನಷ್ಟೇ ಕಟ್ ಮಾಡಿ ವೈರಲ್ ಮಾಡುವ ಮೂಲಕ ಅಂದು ಉಪನಿರ್ದೇಶಕರಾಗಿದ್ದ ಜಯಂತ ಅವರ ಮೇಲೆ ಅಧಿಕಾರ ದುರ್ಬಳಕೆಯ ಆರೋಪ ಹೊರಿಸಲು ಪ್ರಯತ್ನ ನಡೆದಿತ್ತು. ನಿಜವಾದ ದಾಖಲಾತಿಗಳು ಇದೀಗ ಈ ಆರೋಪಗಳಿಗೆ ಯಾವುದೇ ಆಧಾರ ಇಲ್ಲವೆಂದು ತೋರಿಸಿವೆ.

ಆಡಳಿತಾತ್ಮಕ ಕಾರಣಗಳಿಂದ ಜಯಂತ ಅವರು ಬೆಂಗಳೂರು ಕಾರ್ಯನಿಮಿತ್ತವಿದ್ದ ಸಂದರ್ಭದಲ್ಲಿ, ಇಲಾಖೆಯ ಇನ್‌ಚಾರ್ಜ್ ಜವಾಬ್ದಾರಿಯನ್ನು ಸಹಾಯಕ ಆಯುಕ್ತರು ವಹಿಸಿಕೊಂಡಿದ್ದರು. ಇದೇ ಸಮಯವನ್ನು ದುರುಪಯೋಗಪಡಿಸಿಕೊಂಡು, ಕೆಲವು ಗುಂಪುಗಳು ಜಯಂತ ಅವರ ಮೇಲೆ ಅಪಪ್ರಚಾರ ನಡೆಸಲು ಯತ್ನಿಸಿದೆಯೆಂಬ ಶಂಕೆ ದಾಖಲೆಗಳಿಂದ ಮೂಡಿದೆ. ಜಿಲ್ಲೆಯ ಪ್ರವಾಸೋದ್ಯಮದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರಿಂದಲೇ ಅವರಿಗೆ ವಿರೋಧಿಗಳಿಂದ ‘ವೈರಲ್ ವಿಡಿಯೋ’ ಮೂಲಕ ಷಡ್ಯಂತ್ರ ರೂಪಿತವಾಗಿತ್ತೇ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಸುಳ್ಳು ಆರೋಪಗಳಿಂದ ಮಾನಸಿಕ ಒತ್ತಡ ಅನುಭವಿಸಿದ ಜಯಂತ ಅವರು ಇಲಾಖೆಯಿಂದ ಬಿಡುಗಡೆ ಮಾಡಬೇಕೆಂದು ಮೇಲಧಿಕಾರಿಗಳಿಗೆ ಪತ್ರ ಬರೆದ ನಂತರ, ಅವರನ್ನು ಅಲ್ಲಿ‌ನಿಂದ ವರ್ಗಾವಣೆ ಮಾಡಲಾಯಿತು. ವಿವಾದದ ಬಳಿಕ ಪ್ರವಾಸೋದ್ಯಮ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಹಿಂದಿನ ಸ್ಥಳಕ್ಕೆ ಮರುಸ್ಥಳಾಂತರ ನಡೆಸಲಾಗಿದೆ.

ಒಟ್ಟಿನಲ್ಲಿ, ಮಂಚದ ವಿಡಿಯೋ ಆಧರಿಸಿ ಸೃಷ್ಟಿಸಿದ ಗದ್ದಲ ಸಂಪೂರ್ಣ ತಪ್ಪು ಮಾಹಿತಿಯ ಮೇಲೆ ನಿಂತದ್ದಾಗಿದ್ದು, ಸಂಬಂಧಿತ ಅಧಿಕಾರಿಯ ವಿರುದ್ಧ ಯಾವುದೇ ತಪ್ಪು ಕಂಡುಬರಲಿಲ್ಲವೆಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

Please Share: