ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಬೆಳಿಗ್ಗೆ ಪೊಲೀಸರು ನಡೆಸಿದ ಅಚಾನಕ್ ಶೋಧನೆಯ ವೇಳೆ ನಿಷೇಧಿತ ವಸ್ತುಗಳು ಪತ್ತೆಯಾದ ಘಟನೆ ಕಾರವಾರ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ ಮುಂಜಾನೆ 6.30ರ ಸುಮಾರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ವಿಶೇಷ ಶೋಧನಾ ತಂಡವನ್ನು ರಚಿಸಲಾಗಿತ್ತು. ತಂಡದ ಉಸ್ತುವಾರಿ ಅಧಿಕಾರಿ ಕಾರವಾರ ಸಂಚಾರ ಠಾಣೆಯ ಪಿ.ಎಸ್.ಐ ಶ್ರೀಕಾಂತ ರಾಠೋಡ ಅವರು ಶೋಧನಾ ಕಾರ್ಯಾಚರಣೆಯ ವರದಿ ನೀಡಿದ್ದಾರೆ.
ಪರಿಶೀಲನೆಯ ವೇಳೆ 32 ವರ್ಷದ ಬಂದಿಯಾದ ಮೊಹಮ್ಮದ್ ನೌಫಲ್ ಎಂಬವನ ಬಳಿ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಇದಲ್ಲದೆ ಇದೇ ಬ್ಯಾರಕ್‌ನ 9ನೇ ಸೆಲ್‌ನಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಿಂದ ಬೀಡಿ ಪ್ಯಾಕ್, ಬೆಂಕಿಪಟ್ಟಣ, ಸಂಶಯಾಸ್ಪದ ಸೊಪ್ಪಿನ ಪುಡಿ ಇರುವ ವೇಪರ್ ಪ್ಯಾಕೆಟ್‌ಗಳು ಹಾಗೂ ಲೈಟರ್ ವಶಪಡಿಸಿಕೊಳ್ಳಲಾಗಿದೆ.
ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಹೇಗೆ ಸೇರಿವೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕರ್ನಾಟಕ ಕಾರಾಗೃಹ ತಿದ್ದುಪಡಿ ಅಧಿನಿಯಮದಡಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ವಿ. ಗಿರೀಶ್ ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಕಾರವಾರ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

