ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಬೊಗ್ರಿಬೈಲ್–ನವಗದ್ದೆ ಬಳಿ ಮಂಗಳವಾರ ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಪ್ರದೇಶದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಟ್ಯಾಂಕರ್ ಒಳಗಿದ್ದ ಮಿಥೇನ್ ಗ್ಯಾಸ್ ಸೋರಿಕೆ ದೃಢಪಟ್ಟಿದ್ದು, ಸುರಕ್ಷತಾ ಕಾರಣಕ್ಕೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ. ಘಟನೆಯ ನಂತರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ತತ್‍ಕ್ಷಣ ಆದೇಶ ಜಾರಿ ಮಾಡಿ, ಸೋರಿಕೆ ಸ್ಥಳದ ಸುತ್ತಲಿನ 1 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟ ಸಂಪೂರ್ಣ ನಿಷೇಧ ಮಾಡಿದ್ದಾರೆ. ರಕ್ಷಣಾ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಆ ಪ್ರದೇಶ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

ಟ್ಯಾಂಕರ್‌‍ನ ಸಂಖ್ಯೆ EM 04 GC 7750 ಆಗಿದ್ದು, ಇದು ಸಾತಾರಾ ಮಾಲೀಕತ್ವದ ವಾಹನ. ಗುಜರಾತ್‌ನಿಂದ ಹೆಬ್ರಿ–ವಿಶ್ವಾಸನಗರ ಕಡೆಗೆ ಮಿಥೇನಾಲ್ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕನಿಗೆ ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ.

ರಸ್ತೆ ಸಂಚಾರಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದ್ದು, ವಾಹನಗಳನ್ನು ಹಿಲ್ಲೂರು–ವಾಸರಕುದ್ರಿಗೆ ಪರ್ಯಾಯ ಮಾರ್ಗದ ಮೂಲಕ ವಹಿಸಲು ವ್ಯವಸ್ಥೆ ಒದಗಿಸಲಾಗಿದೆ.

ಸ್ಥಳದಲ್ಲಿ ಈಗಾಗಲೇ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ತುರ್ತು ಪ್ರತಿಕ್ರಿಯಾ ತಂಡ ಕಾರ್ಯಾಚರಿಸುತ್ತಿದೆ. ಗ್ಯಾಸ್ ಸೋರಿಕೆ ನಿಯಂತ್ರಣಕ್ಕಾಗಿ ಉಡುಪಿ–ಹೆಬ್ರಿಯಿಂದ ತಜ್ಞ ತಂತ್ರಜ್ಞರ ತಂಡ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಜಾಗೃತಿ ಸೂಚನೆಯಾಗಿ, ಅಧಿಕಾರಿಗಳು ಸ್ಥಳೀಯರಿಗೆ ಅಗತ್ಯವಲ್ಲದ ಓಡಾಟ ತಪ್ಪಲು, ವಾಹನ ಚಾಲಕರು ಪರ್ಯಾಯ ಮಾರ್ಗ ಬಳಸಲು, ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಸಹಕಾರ ನೀಡಲು ಮನವಿ ಮಾಡಿದ್ದಾರೆ.

 

 

Please Share: