ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಗೋಕರ್ಣದ ಪ್ರಸಿದ್ಧ ಕುಡ್ಲೆ ಕಡಲ ತೀರದಲ್ಲಿ ಈಜಲು ಬಂದಿದ್ದ ಕಜಕಿಸ್ತಾನದ ಪ್ರವಾಸಿಗೆಯೊಬ್ಬಳು ಅಲೆಗಳ ಒತ್ತಡಕ್ಕೆ ಸಿಲುಕಿ ಜೀವಕ್ಕೆ ಅಪಾಯ ಎದುರಿಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಸ್ಥಳದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಯುವತಿಯನ್ನು ಸುರಕ್ಷಿತವಾಗಿ ತೀರಕ್ಕೆ ತಲುಪಿಸಿದೆ.
ಮೂಲತಃ ಕಜಕಿಸ್ತಾನದಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ದಂಪತಿ ಕಡಲ ತೀರದಲ್ಲಿ ಈಜುತ್ತಿದ್ದ ವೇಳೆ ಐದಾಲಿ (25) ಎಂಬ ಯುವತಿ ಅಲೆಗಳ ಹೊಡೆತಕ್ಕೆ ಒಳಗಾಗಿದ್ದು, ಸ್ವತಃ ಹೊರಬರುವ ಸಾಧ್ಯತೆಯಿಲ್ಲದ ಪರಿಸ್ಥಿತಿ ಉಂಟಾಯಿತು. ಈ ಕ್ಷಣವನ್ನು ಗಮನಿಸಿದ ತೀರದಲ್ಲಿದ್ದ ಜೀವರಕ್ಷಕರು ತಕ್ಷಣ ನೀರಿಗೆ ಇಳಿದು ಸಮನ್ವಯದ ರಕ್ಷಣಾ ಕಾರ್ಯ ನಡೆಸಿದರು.
ಮಂಜುನಾಥ ಹರಿಕಂತ್ರ, ಗಿರೀಶ ಗೌಡ, ನಾಗೇಂದ್ರ ಕುರ್ಲೆ ಹಾಗೂ ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ತಂಡದ ಲಕ್ಷ್ಮಿಕಾಂತ ಹರಿಕಂತ್ರ ಸೇರಿ ಹಲವು ಮಂದಿ ರಕ್ಷಣೆಯಲ್ಲಿ ಪಾಲ್ಗೊಂಡರು. ಟೂರಿಸ್ಟ್ ಮಿತ್ರ ಶೇಖರ್ ಹರಿಕಂತ ಕೂಡಾ ನೆರವಿಗೆ ಧಾವಿಸಿ ಕಾರ್ಯಾಚರಣೆಗೆ ಬೆಂಬಲ ನೀಡಿದರು.
ತ್ವರಿತ ಮತ್ತು ಧೈರ್ಯಶಾಲಿ ಕ್ರಮಗಳಿಂದ ಯುವತಿ ಜೀವಪಾಯದಿಂದ ಪಾರಾಗಿದ್ದಾರೆ. ಕಡಲ ತಡಿಯ ರಕ್ಷಕ ಸಿಬ್ಬಂದಿಯ ಚುರುಕಿನ ಕಾರ್ಯಾಚರಣೆ ಸ್ಥಳೀಯರಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

