ಕರಾವಳಿ ವಾಯ್ಸ್ ನ್ಯೂಸ್

ಮುರ್ಡೇಶ್ವರ: ಕಟ್ಟಡ ಕಾಮಗಾರಿಯ ಸಮಯದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಜೀವ ಕಳೆದುಕೊಂಡಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ಮೃತರನ್ನು ಮುರ್ಡೇಶ್ವರ ಬಸ್ತಿಯ ಪ್ರಭಾಕರ್ ಮುತಪ್ಪ ಶೆಟ್ಟಿ (48) ಹಾಗೂ ಕುಂದಾಪುರ ತಾಲೂಕಿನ ಗೋಳಿಹೊಳೆಯ ಬಾಬಣ್ಣ ಪೂಜಾರಿ (45) ಎಂದು ಗುರುತಿಸಲಾಗಿದೆ.

ಕಾಮತ್ ಯಾತ್ರ ನಿವಾಸದ ಮಾಲೀಕ ವೆಂಕಟದಾಸ ಕಾಮತ್ ಅವರ ಹೊಸ ಕಟ್ಟಡ ನಿರ್ಮಾಣದ ವೇಳೆ ಮಿನಿ ಲಿಫ್ಟ್ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ವಸ್ತು ಸಾಗಾಣಿಕೆಗಾಗಿ ಬಳಸಲಾಗುತ್ತಿದ್ದ ತಾತ್ಕಾಲಿಕ ಲಿಫ್ಟ್‌ನ ಸೆಫ್ಟಿ ಲಾಕ್ ಹಾಗೂ ಕೇಬಲ್ ದೋಷಗೊಂಡು, ಲಿಫ್ಟ್ ಬಿದ್ದು ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮೊದಲಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮುರ್ಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಪ್ರಭಾಕರ್ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ, ಕಟ್ಟಡ ಮಾಲೀಕ ಹಾಗೂ ಲಿಫ್ಟ್ ತಯಾರಿಕಾ ಸಂಸ್ಥೆಯ ವಿರುದ್ಧ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ದೂರು ದಾಖಲಿಸಿದ್ದಾರೆ.

ಮುರ್ಡೇಶ್ವರ ಠಾಣೆಯ ಪಿಎಸೈ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ. ಈ ದುರಂತ ಸ್ಥಳೀಯರು ಮತ್ತು ಕಾರ್ಮಿಕ ವಲಯದಲ್ಲಿ ದುಃಖದ ವಾತಾವರಣ ಉಂಟುಮಾಡಿದೆ.

Please Share: