ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಗೋವಾದಿಂದ ಕಾರವಾರದತ್ತ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಅಬಕಾರಿ ಇಲಾಖೆ ಪತ್ತೆಹಚ್ಚಿದ್ದು, ಒಟ್ಟು 54 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಒಂದರಲ್ಲಿ ಮಹಿಳೆ ನಡೆದುಕೊಂಡು ಮದ್ಯ ಸಾಗಿಸುತ್ತಿದ್ದರೆ, ಮತ್ತೊಂದರಲ್ಲಿ ಆರೋಪಿತನು ಬೈಕ್ನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗದ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕಾರವಾರದ ಮಾಜಾಳಿ ತನಿಖಾ ಠಾಣೆ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಈ ಕಾರ್ಯಾಚರಣೆ ನಡೆಯಿತು.
ನಡೆದುಕೊಂಡು ಮದ್ಯ ಸಾಗಾಟ:
ಸೋಮವಾರ ಬೆಳಗ್ಗೆ ಸುಮಾರು 11.30ರ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಕಾರವಾರದತ್ತ ಎರಡು ಚೀಲಗಳನ್ನು ಹೊತ್ತುಕೊಂಡು ಬರುತ್ತಿದ್ದ ಮಹಿಳೆಯನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ಚೀಲಗಳಲ್ಲಿ 750 ಮಿ.ಲೀ. ಸಾಮರ್ಥ್ಯದ 37 ಗೋವಾ ಮದ್ಯದ ಬಾಟಲಿಗಳು (ಒಟ್ಟು 27.5 ಲೀ.) ಪತ್ತೆಯಾದವು. ಆರೋಪಿತಳನ್ನು ಮದ್ಯ ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಕಾರವಾರ ವಲಯದ ಅಬಕಾರಿ ಉಪ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ.
ಬೈಕ್ನಲ್ಲಿ ಮದ್ಯ ಸಾಗಾಟ:
ಮಾರ್ಚ್ 5ರಂದು ಬೆಳಗಿನ ಜಾವ ಸುಮಾರು 1.20ರ ವೇಳೆಗೆ ಗೋವಾದಿಂದ ಕಾರವಾರದತ್ತ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಬಿಳಿ ಚೀಲದಲ್ಲಿ 750 ಮಿ.ಲೀ. ಸಾಮರ್ಥ್ಯದ 36 ಗೋವಾ ಮದ್ಯದ ಬಾಟಲಿಗಳು (ಒಟ್ಟು 27 ಲೀ.) ಪತ್ತೆಯಾಯಿತು. ತಪಾಸಣೆ ವೇಳೆ ಆರೋಪಿತನು ಸ್ಥಳದಿಂದ ಪರಾರಿಯಾಗಿದ್ದು, ಅವನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿ ಮುಂದಿನ ಕ್ರಮಕ್ಕಾಗಿ ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಿಗೆ ಒಪ್ಪಿಸಲಾಗಿದೆ.
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ತಡೆಯಲು ಅಬಕಾರಿ ಇಲಾಖೆ ತಪಾಸಣೆ ಕಾರ್ಯಾಚರಣೆಗಳನ್ನು ಮುಂದುವರಿಸಿದೆ.
